ರಂಗಕರ್ಮಿ ಕೆ.ಆರ್.ಪ್ರಕಾಶ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ರಂಗಕರ್ಮಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಕೆ.ಆರ್.ಪ್ರಕಾಶ್ ಅವರು ತಡರಾತ್ರಿ ವಿಧಿವಶರಾಗಿದ್ದಾರೆ. ರಾಮಚಂದ್ರಹೆಗಡೆ ಮತ್ತು ಸರಸ್ವತಿ ಹೆಗಡೆ ದಂಪತಿಯ ಪುತ್ರರಾದ ಪ್ರಕಾಶ್ ಅವರು ಕಳೆದ 33 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿಸರ್ಗ ರಂಗಭೂಮಿಯ ಪರಿಕಲ್ಪನೆ ಇವರ ಹೊಸ ಆವಿಷ್ಕಾರವಾಗಿದೆ. ರಂಗಭೂಮಿಯಲ್ಲಿ 18 ವಿಶಿಷ್ಟ ರಂಗಪ್ರಯೋಗಗಳನ್ನು ಮಾಡಿದ್ದಾರೆ.

1029 ನಾಟಕಗಳಲ್ಲಿ ಅಭಿನಯಿಸಿದ್ದು, 182 ನಾಟಕಗಳನ್ನು ನಿರ್ದೇಶಿಸಿದ್ದಾರೆ. 52 ರಂಗ ತರಬೇತಿ ಶಿಬಿರಗಳನ್ನು ನಡೆಸಿರುವ ಇವರು 642 ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಏಡ್ಸಾಯಣ, ಸಂಸಾರದಲ್ಲಿ ಸನಿದಪ, ಮಹಾರಾತ್ರಿ, ಶಾಪ ಮುಂತಾದ ವಿಶಿಷ್ಟ ರಂಗಪ್ರಯೋಗಗಳನ್ನು ನಡೆಸಿದ್ದಾರೆ. ವೃತ್ತಿ ಕಂಪೆನಿ ನಾಟಕಗಳಲ್ಲಿ ನಟಿಸಿದ್ದಾರೆ. ಹವ್ಯಕರ ಇಂದಿನ ಸ್ಥಿತಿ ಆಧರಿಸಿ ಯಂಗ ಊದಶಂಕ ಊದವೆಯಾ ಕೃತಿಯನ್ನು ರಚಿಸಿ, ನಟಿಸಿ, ನಿರ್ದೇಶಿಸಿದ್ದಾರೆ.

ಸಂತಾಪ: ಕಳೆದ 1 ವರ್ಷದಿಂದ ಕರ್ನಾಟಕ ನಾಟಕ ಅಕಾಡೆಮಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರು, ಸರ್ವ ಸದಸ್ಯರು, ರಿಜಿಸ್ರ್ಟಾರ್ ಮತ್ತು ಸಿಬ್ಬಂದಿ ವರ್ಗ ತೀವ್ರ ಸಂತಾಪವನ್ನು ವ್ಯಕ್ತಪಡಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇಂದು ನಡೆಯಬೇಕಾಗಿದ್ದ ನಾಟಕ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆಯನ್ನು ಮೃತರ ಗೌರವಾರ್ಥ ಮುಂದೂಡಲಾಗಿದೆ.

Facebook Comments