ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲ : ಶಾಸಕ ಕೃಷ್ಣಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಜೂ.6- ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಕೃಷ್ಣಭೈರೇಗೌಡ ದೂರಿದರು. ಚನ್ನರಾಯಪಟ್ಟಣ ಹೋಬಳಿಯ ದಿನ್ನೂರು ಗ್ರಾಮದ ತಾಪಂ ಸದಸ್ಯರಾದ ವೆಂಕಟೇಶ್ ಸಹಯೋಗದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಇಂತಹ ಕಷ್ಟ ಕಾಲದಲ್ಲಿ ರೈತರಿಗೆ ಸಹಾಯ ಮಾಡಲಿಲ್ಲವೆಂದರೆ ಸರ್ಕಾರ ಇನ್ಯಾರಿಗೆ ಸಹಾಯ ಮಾಡಬೇಕಿದೆ? ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ನಷ್ಟ ಅನುಭವಿದ್ದಾರೆ.

ಸರಿಯಾದ ಮಾರುಕಟ್ಟೆ ದೊರೆತಿಲ್ಲ. ರೈತರಿಗೆ ಪರಿಹಾರ ಕೊಡುವುದಾಗಿ ತಿಳಿಸಿದ ಸರ್ಕಾರ ಅದನ್ನೂ ಕೊಡದೆ ಹೋಗಿರುವುದು ಸರ್ಕಾರ ರೈತರ ಬಗ್ಗೆ ಎಷ್ಟು ನಿರ್ಲಕ್ಷ್ಯ ಧೋರಣೆ ಹೊಂದಿದೆ ಎನ್ನುವುದಕ್ಕೆ ಉದಾಹರಣೆ ಎಂದರು. ಕಾಂಗ್ರೆಸ್ ಪಕ್ಷದ ಮುಖಂಡರು ರಾಜ್ಯಾದ್ಯಂತ ತಮ್ಮ ಸ್ವಂತ ಖರ್ಚಿನಲ್ಲಿ ರೈತರ ಬೆಳೆ ಖರೀದಿಸಿದ್ದಾರೆ. ಸಾವಿರಾರು ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು, ಗ್ರಾಪಂ ಮಟ್ಟದ ಅಧಿಕಾರಿಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಅವರನ್ನು ಶ್ಲಾಘಿಸಬೇಕು ಎಂದು ಹೇಳಿದರು.

ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕುಲ ಕಸುಬನ್ನು ನಂಬಿದವರು, ಆಟೋ, ಟ್ಯಾಕ್ಸಿ ಚಾಲಕರು ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ ನವರು ಇವರ ಪರವಾಗಿ ನಿಂತಿದ್ದಕ್ಕೆ ಸರ್ಕಾರ ಇವರಿಗೆ ಪರಿಹಾರ ಧನ ನೀಡುವ ಭರವಸೆ ನೀಡಿದ್ದು ಅದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಸದಸ್ಯರಾದ ಅನಂತಕುಮಾರಿ, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ಚೇತನ್ ಗೌಡ, ತಾಪಂ ಸದಸ್ಯರಾದ ವೆಂಕಟೇಶ್, ಮಂಜುನಾಥ್, ಚೈತ್ರ, ನಂದಿನಿ, ಶಶಿಕಲಾ, ಮುಖಂಡರಾದ ಸಿ.ಜಗನ್ನಾಥ್, ಶ್ರೀನಿವಾಸಗೌಡ, ಲಕ್ಷ್ಮಣಗೌಡ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಕಾಂಗ್ರೆಸ್ ತಾಲ್ಲೂಕು ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಕೃಷಿಕ ಸಮಾಜದ ನಿರ್ದೇಶಕ ಯಲುವಳ್ಳಿ ನಟರಾಜ್ ಮತ್ತಿತರರು ಹಾಜರಿದ್ದರು.

Facebook Comments