ಸರ್ಕಾರಿ ಕಟ್ಟಡ ನಿರ್ಮಾಣದ ವೇಳೆ ಮಳೆ ಕೊಯ್ಲು, ಗಿಡ ನೆಡುವುದು ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 18 -ಯಾವುದೇ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ಧ ಪಡಿಸುವ ಅಂದಾಜು ಪಟ್ಟಿಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮತ್ತು ಗಿಡ ನೆಡುವುದನ್ನು ಕಡ್ಡಾಯಗೊಳಿಸುವ ಉದ್ದೇಶ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಲಾಮೃತ ಮತ್ತು ಜಲವರ್ಷ ಅಭಿಯಾನದ ಅಂಗವಾಗಿ ವಿಶ್ವ ಪರಿಸರದ ದಿನಾಚರಣೆ ಭಾಗವಾಗಿ ಜೂನ್ 11ರಂದು ಕನಿಷ್ಟ 30ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದರು.

ಸತತ ಬರಗಾಲ, ಮಳೆಕೊರತೆ ಹಿನ್ನೆಲೆಯಲ್ಲಿ ಜಲಸಂರಕ್ಷಣೆ ಮತ್ತು ಜಲ ಜಾಗೃತಿ ಮೂಡಿಸುವ ಉದ್ದೇಶವಿರುವ ಜಲಾಮೃತ-ಜಲವರ್ಷ ಎಂಬ ಅಭಿಯಾನ ಆರಂಭಿಸಲಾಗಿದೆ.

ಇದರಲ್ಲಿ ನೀರಿನ ಮಹತ್ವ ಮತ್ತು ನೀರಿನ ಕೊರತೆಯನ್ನು ಜನರು ಅರ್ಥ ಮಾಡಿಕೊಂಡು ಮನೆ ಮನೆಗಳಲ್ಲಿಯೂ ಮಳೆ ನೀರನ್ನು ಸಂಗ್ರಹಿಸಬೇಕು.  ಲಸಾಕ್ಷರತೆ, ಜಲಸಂರಕ್ಷಣೆ, ಜಲಪ್ರಜ್ಞಾವಂತ ಬಳಕೆ, ಹಸಿರೀಕರಣ, ಆದ್ಯತೆಯಾಗಿದ್ದು ಜೂನ್ 11ರಂದು ಸಾರ್ವಜನಿಕರು ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರನ್ನು ಸೇರಿಸಿ ರಾಜ್ಯಾದ್ಯಂತ ಕನಿಷ್ಟ 30 ಲಕ್ಷ ಸಸಿ ನೆಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಸಂಬಂಧ ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮೂಲಕ ಸುಮಾರು 2ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ.

ಅರಣ್ಯ ತೋಟಗಾರಿಕೆ ಇಲಾಖೆ ಜಿ.ಪಂಗಳನೊಳಗೊಂಡ ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ಸಸಿ ನೀಡಲಾಗುವುದು ಮಾವು, ಹಲಸು ಹಣ್ಣಿನ ಗಿಡಗಳಿಗೂ ಆಧ್ಯತೆ ನೀಡಿದ್ದು ಸಸಿಗಳ ನಿರ್ವಹಣೆಯನ್ನು ಗ್ರಾ.ಪಂಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.

ಜಿ.ಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಚೇರಿಯಲ್ಲಿ ಕಡ್ಡಾಯವಾಗಿ ಸಸಿ ನೆಡಲಾಗುತ್ತದೆ, ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ವಾಣಿಜ್ಯ ಕಟ್ಟಡಗಳಲ್ಲೂ ಮಳೆ ನೀರು ಸಂಗ್ರಹ ವ್ಯವಸ್ಥೆ ರೂಪಿಸುವುದನ್ನು ಕಡ್ಡಾಯಗೊಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

ಸುಮಾರು 500ಕೋಟಿ ರೂ. ವೆಚ್ಚದಲ್ಲಿ 20ಸಾವಿರ ಚೆಕ್ ಡ್ಯಾಂ, 14 ಸಾವಿರ ಸಣ್ಣಪುಟ್ಟ ಜಲತಾಣಗಳು ಪುರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ. ರಸ್ತೆ ಬದಿಗಳಲ್ಲಿ ಗಿಡ ನೆಡುವುದು ಕಡ್ಡಾಯವಾಗಿ ಅಂದಾಜು ಪಟ್ಟಿಯಲ್ಲಿ ಅಳವಡಿಸಿ ಅನುಷ್ಟಾನಗೊಳಿಸಲಾಗುವುದು.

ಗ್ರಾಮೀಣ ವಿಕಾಸ್ ಯೋಜನೆಯಡಿ ಶೇ. 1ರಷ್ಟು ಹಣವನ್ನು ಗಿಡ ನೆಡುವುದಕ್ಕಾಗಿ ಬಳಸಲು ತೀರ್ಮಾನಿಸಲಾಗಿದೆ. ಜಲ ಸಾಕ್ಷರತೆಗೆ ಸಂಬಂಧಿಸಿದಂತೆ ಪ್ರತಿ ಶಾಲಾ-ಕಾಲೇಜು, ಗ್ರಾಮಪಂಚಾಯಿ ಮಟ್ಟದಲ್ಲಿ ಸಂವಾದವನ್ನು ನಡೆಸಲು ತೀರ್ಮಾನಿಸಲಾಗಿದೆ.

ಗ್ರಾಮೀಣ ಭಾಗದಲ್ಲೂ ಕಸದ ಸಮಸ್ಯೆ ನಿವಾರಣೆಗೆ ಸ್ವಚ್ಛ ಮೇವ ಜಯತೆ ಜಾರಿಗೆ ತಂದಿದ್ದು, ಪ್ರಸಕ್ತ ವರ್ಷ 1ಸಾವಿರ ಗ್ರಾ.ಪಂ ಗಳಲ್ಲಿ ಘನತ್ಯಾಜ್ಯ ನಿವಾರಣಾ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದರು.

ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅತಿಕ್, ಉಮಾ ಮಹಾದೇವನ್, ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆಯ ಆಯುಕ್ತ ವೈ.ಎಸ್. ಪಾಟೀಲ್ ಸೇರಿದಂತೆ ಇತರರ ಉಪಸ್ಥಿತರಿದ್ದರು.

Facebook Comments