ಸದನದಲ್ಲಿ ಬಿ.ಸಿ.ಪಾಟೀಲ್ ಫೋನ್ ಸಂಭಾಷಣೆ ಪ್ರಸ್ತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ.ಸಿ.ಪಾಟೀಲ್ ಹಾಗೂ ರಾಜಕೀಯ ನಾಯಕರೊಬ್ಬರ ನಡೆದಿದೆ ಎನ್ನಲಾದ ಸಂಭಾಷಣೆಯ ವಿಚಾರವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿಂದು ಪ್ರಸ್ತಾಪಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ವಿರೋಧ ಪಕ್ಷದವರು ವಿಶ್ವಾಸಮತದ ನಿರ್ಣವನ್ನು ತಕ್ಷಣವೇ ಮತಕ್ಕೆ ಹಾಕಿ ಎಂದು ಒತ್ತಾಯ ಮಾಡುತ್ತಿದ್ದಾರೆ. ರಾಜೀನಾಮೆ ಕೊಟ್ಟಿರುವವರು ನಮಗೆ ಸಂಬಂಧವೇ ಇಲ್ಲ ಎಂಬ ರೀತಿ ಇದ್ದಾರೆ. ಹಾಗಾದರೆ ರಾಜೀನಾಮೆ ನೀಡಿರುವ ಉದ್ದೇಶ ವೇನು ಎಂಬುದರ ಬಗ್ಗೆ ಚರ್ಚೆ ಯಾಗಲಿ ಎಂದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಏಳೆಂಟು ತಿಂಗಳಿನಿಂದಲೂ ಬಿಜೆಪಿ ನಾಯಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ವಿರುದ್ಧ ನಮ್ಮ ಪಕ್ಷ ಈಗಾಗಲೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ನೀಡಿದೆ. ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿ ನಾಯಕರೊಂದಿಗಿನ ಸಂಬಂಧ ಅನ್ಯೂನ್ಯವಾಗಿ ಇದೆ ಎಂದು ಆರೋಪಿಸಿದರು.

ಬಿ.ಸಿ.ಪಾಟೀಲ್ ಅವರು ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಬೇಸತ್ತಿದ್ದಾರೆ. ಒಂದು ಸಂಭಾಷಣೆ ನಡೆದ ವಿಚಾರವನ್ನು ಸದನದ ಗಮನಕ್ಕೆ ತರುವುದಾಗಿ ಹೇಳಿ, ನಮ್ಮ ನಾಯಕರು ಮಾತನಾಡುತ್ತಾರೆ ಎಂಬ ಸಂಭಾಷಣೆ ಆರಂಭವಾಗುತ್ತದೆ. ಅದರಲ್ಲಿ ಸಾಬರು ಹೇಳಿದರಲ್ಲ. ಅಮೌಂಟ್ ಪ್ರಸ್ತಾಪಿಸಿಲ್ಲ ಎಂಬ ಉಲ್ಲೇಖವಿದೆ.

ನನ್ನೊಂದಿಗೆ ಮೂರ್ನಾಲ್ಕು ಮಂದಿ ಇದ್ದಾರೆ ಎಂದಾಗ. ನಿಮಗೆ 25, ಅವರಿಗೆ 15 ಕೊಡೋಣ. ಅವರನ್ನು ಮಂತ್ರಿ ಮಾಡೋಣ, ಉಪ ಚುನಾವಣೆ ಆಗುವುದಿಲ್ಲ. ಆಂಧ್ರಪ್ರದೇಶದಲ್ಲಿ ಏನಾಯಿತು? ಅದೇ ರೀತಿ ನಾಲ್ಕು ವರ್ಷ ಮಂತ್ರಿಯಾಗಿರುತ್ತೀರಿ ಎಂಬ ಸಂಭಾಷಣೆ ನಡೆದಿದೆ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರದಲ್ಲೂ ನಾವೇ ಅಧಿಕಾರದಲ್ಲಿದ್ದು, ಏನು ಬೇಕಾದರೂ ಮಾಡಬಹುದು ಎಂಬ ರೀತಿ ಸಂಭಾಷಣೆ ಇದೆ. ಇದೆಲ್ಲವೂ ಕಲ್ಪನೆಯೇ ? ಇಂದೇ ವಿಶ್ವಾಸಮತ ಸಾಬೀತು ಪಡಿಸಿ ಎಂದು ಹೇಳುತ್ತಾರಲ್ಲ. ಇದು ನೈತಿಕತೆಯೇ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕರನ್ನು ಚುಚ್ಚಿದರು.

ತಾವು ಈ ಎಲ್ಲಾ ಮಾಹಿತಿಯನ್ನು ಸಾರ್ವಜನಿಕವಾಗಿ ಸಂಗ್ರಹಿಸಿದ್ದಾಗಿ ಹೇಳಿದ ಸಚಿವರು, ತರಾತುರಿಯಲ್ಲಿ ಬಿಜೆಪಿಯವರಿದ್ದಾರೆ. ರಾಜೀನಾಮೆ ಹಿಂದೆ ಏನೆಲ್ಲಾ ಅಡಗಿದೆ ಎಂಬುದು ಗೊತ್ತಿಲ್ಲವೆ? ಸಾಮೂಹಿಕ ಮರೆವು ಕಾಣುತ್ತಿದ್ದೇವೆ.

ರಾಜೀನಾಮೆ ನೀಡುವುದಕ್ಕೂ ಬಿಜೆಪಿಯವರಿಗೂ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ, ರಾಜೀನಾಮೆ ನೀಡಿದ ಶಾಸಕರೊಬ್ಬರು ಬಿಜೆಪಿ ಸೇರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಿಜೆಪಿಯಿಂದ ಟಿಕಟ್ ಸಿಕ್ಕುವ ಭರವಸೆ ಇದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಇದರಲ್ಲಿ ಇವರ (ಬಿಜೆಪಿ) ಹಸ್ತಕ್ಷೇಪವಿಲ್ಲವೇ. ಆಪರಮೇಷನ್ ಕಮಲ ಇಲ್ಲವೇ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪವೆತ್ತಲು ಮುಂದಾದರು. ಕಾಂಗ್ರೆಸ್ ಪಕ್ಷದ ಶಾಸಕ ಈಶ್ವರ್ ಖಂಡ್ರೆ ಮಧ್ಯ ಪ್ರವೇಶಿಸಿ ಇಂತಹ ಶಾಸಕರೇ ಅವರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹೇಗೆ ಗೊತ್ತಾಯಿದು ಎಂದು ಛೇಡಿಸಿದರು.

ಮತ್ತೊಂದು ವಿಷಯವನ್ನು ಪ್ರಸ್ತಾಪಿಸಿದ ಸಚಿವ ಕೃಷ್ಣಬೈರೇಗೌಡ, ಶಾಸಕರ ಕುಟುಂಬದವರೊಂದಿಗೂ ಸಭಾಷಣೆ ನಡೆದಿದೆ. ಶಾಸಕ ಹಾಗೂ ಪುತ್ರನ ಮೇಲಿರು ಕೇಸನ್ನು ಕಾನೂನು ರೀತಿಯಲ್ಲಿ ಪರಿಹರಿಸುವ ಹಾಗೂ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ.

ಇದು ನೈತಿಕತೆಯೇ? ಮಂತ್ರಿ ಸ್ಥಾನ ಬೇಕಾದರೆ ಐದು ಕೋಟಿ. ಬೇಡವೆನ್ನುವುದಾದರೆ 15ಕೋಟಿ ನೀಡುವ ಪ್ರಸ್ತಾಪವಾಗಿದೆ. ಇದು ಇವರ ನೈತಿಕತೆಯೇ. ಇಂತಹ ನೈತಿಕತೆಯ ಆರಾಧ ಮೇಲೆ ಮುಖ್ಯಮಂತ್ರಿಯವರ ರಾಜೀನಾಮೆ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Facebook Comments