ರೈತರಿಗೆ ಬರಬೇಕಾದ ಕೋಟ್ಯಂತರ ಬೆಳೆ ವಿಮೆ ತಪ್ಪಿದೆ : ಕೃಷ್ಣಭೈರೇಗೌಡ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.11-ರಾಜ್ಯ ಸರ್ಕಾರ ನಿಗದಿತ ಅವಧಿಯಲ್ಲಿ ಬರ ಹಾಗೂ ಪ್ರಕೃತಿ ಪರಿಸ್ಥಿತಿಗಳನ್ನು ಘೋಷಣೆ ಮಾಡದಿರುವುದರಿಂದ ಖಾಸಗಿ ವಿಮಾ ಕಂಪನಿಗಳಿಂದ ಬರಬಹುದಾಗಿದ್ದ ಸುಮಾರು ನಾಲ್ಕೈದು ಸಾವಿರ ಕೋಟಿ ರೂ.ಗಳ ಪರಿಹಾರದ ಹಣ ರೈತರಿಗೆ ತಪ್ಪಿದಂತಾಗಿದೆ ಎಂದು ಕಾಂಗ್ರೆಸ್‍ನ ಶಾಸಕ ಹಾಗೂ ಮಾಜಿ ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ವಿಧಾಮನಸಭೆಯಲ್ಲಿ ನೆರೆ ಪರಿಸ್ಥಿತಿ ಚರ್ಚೆಯಲ್ಲಿ ಭಾಗವಹಿಸಿದ ಅವರು, ಬರ ಹಾಗೂ ನೆರೆಪೀಡಿತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಹಾರ ಕೊಡುತ್ತಿಲ್ಲ. ಖಾಸಗಿ ಕಂಪನಿಗಳಿಂದ ಪರಿಹಾರ ಕೊಡಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಎಚ್ಚರ ತಪ್ಪಿದೆ ಎಂದು ಗಂಭೀರ ಆರೋಪ ಮಾಡಿದರು. ಪ್ರತಿವರ್ಷ 15 ರಿಂದ 20 ಎಕರೆ ಪ್ರದೇಶ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಡಿ ನೋಂದಣಿಯಾಗುತ್ತದೆ. ಖಾಸಗಿ ಕಂಪನಿಗಳು ನಿರ್ವಹಿಸುವ ಈ ಯೋಜನೆಗೆ ರಾಜ್ಯ, ಕೇಂದ್ರ ಸರ್ಕಾರ ಮತ್ತು ರೈತರಿಂದ ಪ್ರೀಮಿಯಮ್ ಕಂತುಗಳನ್ನು ಪಾವತಿಸಲಾಗುತ್ತದೆ.

ರಾಜ್ಯಸರ್ಕಾರ 800 ರಿಂದ 900 ಕೋಟಿ ರೂ. ಪ್ರೀಮಿಯಮ್ ತುಂಬಿ ಕೊಡುತ್ತಿದೆ. ಪ್ರತಿವರ್ಷ ದೇಶದಲ್ಲಿ ಬೆಳೆ ವಿಮೆ ಕಂಪನಿಗಳು 12 ಸಾವಿರ ಕೋಟಿ ಲಾಭ ಮಾಡುತ್ತಿವೆ. ವಿಮೆಯ ಮಾನದಂಡದ ಪ್ರಕಾರ ಪ್ರವಾಹ ಬಂದಾಗ ರೈತರಿಗೆ ಒಟ್ಟು ಪರಿಹಾರ ಮೊತ್ತದ ಶೇ.20ರಷ್ಟನ್ನು ತಕ್ಷಣಕ್ಕೆ ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ.

ಆದರೆ ರಾಜ್ಯಸರ್ಕಾರ ಪ್ರವಾಹ ಪರಿಸ್ಥಿತಿ ಬಗ್ಗೆ 15 ದಿನಗಳೊಳಗಾಗಿ ಮಿಡ್ ಸೀಸನ್ ಅಡ್ವರ್‍ಸಿಟಿ ಎಂದು ಘೋಷಣೆ ಮಾಡಬೇಕಿತ್ತು. ಹಾಗೆ ಘೋಷಣೆ ಮಾಡಿದ್ದರೆ ಅಂದಾಜು 40 ಸಾವಿರ ಪರಿಹಾರದ ಮೊತ್ತ ಇದ್ದವರಿಗೆ ಶೇ.25ರಷ್ಟು ಎಂದರೂ 10 ಸಾವಿರ ರೂ. ತತ್‍ಕ್ಷಣಕ್ಕೆ ರೈತರಿಗೆ ಸಿಗುತ್ತಿತ್ತು. ರಾಜ್ಯದ ರೈತರಿಗೆ ಇದರಿಂದ 3 ರಿಂದ 4 ಸಾವಿರ ರೂ. ಪರಿಹಾರ ಸಿಗುತ್ತಿತ್ತು. ಆದರೆ ಸರ್ಕಾರ ಎಚ್ಚರ ತಪ್ಪಿದ್ದರಿಂದಾಗಿ ವಿಮಾ ಕಂಪನಿಗಳಿಂದ ಕೊಡಿಸಬಹುದಾಗಿದ್ದ ಹಣ ರೈತರಿಗೆ ತಲುಪಿಲ್ಲ.

ಇದು ಗಂಭೀರ ಸ್ವರೂಪದ ಲೋಪ. ಯಾರಾದರೂ ರೈತರು ವಿಮಾ ಕಂಪನಿಯಿಂದ ನನಗೆ ಪರಿಹಾರ ಸಿಕ್ಕಿಲ್ಲ ಎಂದು ಕೇಸ್ ಹಾಕಿದರೆ ರಾಜ್ಯ ಸರ್ಕಾರ ತನ್ನ ಕೈಯಿಂದ ಹಣ ಕಟ್ಟಿಕೊಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಬಿಜೆಪಿ ಶಾಸಕ ಕುಮಾರಬಂಗಾರಪ್ಪ, ಖಾಸಗಿ ವಿಮಾ ಕಂಪನಿಗಳು ಜಿಪಿಎಸ್ ತಂತ್ರಜÁ್ಞನ ಆಧಾರಿತವಾಗಿ ಆನ್‍ಲೈನ್‍ನಲ್ಲೇ ಮಳೆ ಮತ್ತು ಬರದ ಮಾಹಿತಿಯನ್ನು ಪ್ರತಿದಿನ ಪಡೆದುಕೊಳ್ಳುತ್ತವೆ. ರಾಜ್ಯ ಸರ್ಕಾರದ ಯಾವ ಆದೇಶ ಅಥವಾ ಅಧಿಸೂಚನೆಗೂ ಕಾಯದೆ ತಮ್ಮ ಮಾಹಿತಿ ಆಧರಿಸಿ ಪರಿಹಾರ ಘೋಷಣೆ ಮಾಡುತ್ತವೆ ಎಂದರು.

ಇದಕ್ಕೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೂಡ ದನಿಗೂಡಿಸಿದಾಗ ಇದನ್ನು ಒಪ್ಪದ ಕೃಷ್ಣಭೈರೇಗೌಡ ಅವರು, ಪ್ರವಾಹ ಪರಿಸ್ಥಿತಿ ಬಗ್ಗೆ ತಕ್ಷಣವೇ ಘೋಷಣೆ ಮಾಡಿದ್ದರೆ ಕಾನೂನಾತ್ಮಕವಾಗಿ ರೈತರಿಗೆ ಪರಿಹಾರ ಕೊಡುವ ಅನಿವಾರ್ಯತೆ ವಿಮಾ ಕಂಪನಿಗಳಿಗೆ ಬರುತ್ತಿತ್ತು ಎಂದು ವಾದಿಸಿದರು.

Facebook Comments