“ಕಾಫಿ ಡೇ ಸಿದ್ದಾರ್ಥ ಅವರದು ಆತ್ಮಹತ್ಯೆಯಲ್ಲ, ಸರ್ಕಾರಿ ಪ್ರಾಯೋಜಿತ ಕೊಲೆ” : ಕೃಷ್ಣ ಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಕೆಫೆ ಕಾಫಿ ಡೇ ಮಾಲೀಕ ಹಾಗೂ ಉದ್ಯಮಿ ಸಿದ್ದಾರ್ಥ ಅವರದು ಆತ್ಮಹತ್ಯೆಯಲ್ಲ ಅದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಒಕ್ಕಲಿಗ ಸಮುದಾಯ ಹಾಗೂ ವಿವಿಧ ಸಂಘಟನೆಗಳು ಬಸನವಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾಜಿಸಚಿವ ಡಿ.ಕೆ.ಶಿವಕುಮಾರ್ ಪರವಾಗಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಸಾವಿರಾರು ಮಂದಿ ಕನ್ನಡಿಗರಿಗೆ ಉದ್ಯೋಗ ನೀಡಿದ್ದ ಸಿದ್ದಾರ್ಥ್ ಅವರಿಗೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಮೂಲಕ ಕಿರುಕುಳ ನೀಡಿತ್ತು. ಸಿದ್ದಾರ್ಥ್ ಅವರದು ಆತ್ಮಹತ್ಯೆಯಲ್ಲ. ಒಂದು ರೀತಿಯ ಕೊಲೆ ಎಂದು ಆರೋಪಿಸಿದರು.

ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಜಾರಿನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳು ಬಿಜೆಪಿಯ ಸೀಳು ನಾಯಿಗಳಂತೆ ಕೆಲಸ ಮಾಡುತ್ತಿವೆ. ಬಿಜೆಪಿಯವರು ಪಾಕಿಸ್ತಾನವನ್ನು ಟೀಕೆ ಮಾಡುತ್ತಾರೆ. ಅಲ್ಲಿ ಐಎಸ್‍ಐ ಎಂಬ ಸಂಸ್ಥೆ ಇದೆ. ಸೇನೆಯ ವಿರುದ್ದ ಮಾತನಾಡುವವರನ್ನು ಮಟ್ಟ ಹಾಕಲು ಐಎಸ್‍ಐನ್ನು ಚೂ ಬಿಡಲಾಗುತ್ತಿದೆ. ಭಾರತದಲ್ಲೂ ಅದೇ ರೀತಿ ಸಾಂವಿಧಾನಿಕ ಸಂಸ್ಥೆಗಳನ್ನು ನಾಯಿಗಳಂತೆ ಚೂ ಬಿಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರ ನಡುವಿದ್ದ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿನಿರ್ದೇಶನಾಲಯದ ಮೂಲಕ ಬಂಧಿಸಲಾಗಿದೆ.

ಡಿ.ಕೆ.ಶಿವಕುಮಾರ್ ಅವರು ಯಾರ ಅಪ್ಪನ ದುಡ್ಡನ್ನು ತಿಂದಿಲ್ಲ. ಐದು ಕೋಟಿಗೆ ಲೆಕ್ಕ ಕೊಟ್ಟಿಲ್ಲ ಎಂದು ನೆಪ ಹೇಳಿ ಬಂಧನದಲ್ಲಿಡಲಾಗಿದೆ. ಆದರೆ ಭಾರತೀಯರ ಸಾವಿರಾರು ಕೋಟಿ ರೂ.ಗಳನ್ನು ಬ್ಯಾಂಕ್ ಸಾಲದ ಮೂಲಕ ನುಂಗಿ ದೇಶಬಿಟ್ಟು ಪರಾರಿಯಾದ ವಿಜಯ್ ಮಲ್ಯ, ನೀರವ್ ಮೋದಿ, ಚೌಕ್ಸಿಯಂತಹ ಉದ್ಯಮಿಗಳ ವಿರುದ್ಧ ಕೇಂದ್ರ ಸರ್ಕಾರ ಆದಾಯ ತೆರಿಗೆ, ಜಾರಿನಿರ್ದೇಶನಾಲಯ, ಸಿಬಿಐಗಳನ್ನು ಏಕೆ ಬಳಸಲಿಲ್ಲ ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಅವರು ಯಾವುದೇ ತಪ್ಪು ಮಾಡಿಲ್ಲ. ಜಾರಿ ನಿರ್ದೇಶನಾಲಯ ಪ್ರಶ್ನಿಸಿರುವ 5 ಕೋಟಿಗೂ ಲೆಕ್ಕ ಕೊಟ್ಟಿದ್ದಾರೆ. ಆದರೂ ರಾಜಕೀಯ ದ್ವೇಷದಿಂದ ಬಂಧಿಸಲಾಗಿದೆ. ನೇರವಾಗಿ ಜನರ ಎದುರು ನಿಂತು ರಾಜಕಾರಣ ಮಾಡಲು ಧೈರ್ಯವಿಲ್ಲದೆ ಬಿಜೆಪಿಯವರು ಈ ರೀತಿಯ ಹೇಡಿತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಒಂದೆಡೆ ಬಿಜೆಪಿ ನಾಯಕರ ಮೇಲಿನ ಎಲ್ಲ ಕೇಸ್‍ಗಳನ್ನು ಕೈಬಿಡಲಾಗುತ್ತಿದೆ ಮತ್ತೊಂದೆಡೆ ಕಾಂಗ್ರೆಸ್ ನಾಯಕರ ಮೇಲೆ ದುರದ್ದೇಶಪೂರ್ವಕವಾಗಿ ಕೇಸ್ ದಾಖಲಿಸಲಾಗುತ್ತಿದೆ. ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕಾಗಿ ದ್ವೇಷ ಬೆಳೆಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಕಾನೂನಿನ ಅಂಶಗಳನ್ನು ಗಾಳಿಗೆ ತೂರಲಾಗಿದೆ. ರಾಜಕೀಯ ದ್ವೇಷಕ್ಕಾಗಿ ಬಂಧನ ಮಾಡಲಾಗಿದೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ರಾಜಣ್ಣ ಮಾತನಾಡಿ, ಎಲ್ಲಾ ಒಕ್ಕಲಿಗರ ಸಂಘಟನೆಗಳು ಹಾಗೂ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳೂ ಸೇರಿದಂತೆ ಜನರ ಬೆಂಬಲ ಪಾದಯಾತ್ರೆಗೆ ದೊರಕಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಇಡಿ ಮೂಲಕ ಒಕ್ಕಲಿಗ ಮುಖಂಡರ ಮೇಲೆ ರಾಜಕೀಯ ಹಗೆತನ ಸಾಧಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಒಕ್ಕಲಿಗ ಮುಖಂಡರು ಹಾಗೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಈ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ ಎಂದರು.

Facebook Comments

Sri Raghav

Admin