ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ ಹಿಂದಿರುವ ಕಾರಣ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀಕೃಷ್ಣನು ಮಹಾವಿಷ್ಣುವಿನ ಎಂಟನೇ ಅವತಾರ. ಇದನ್ನು ಪೂರ್ಣಾವತಾರ ಎಂದು ಪರಿಗಣಿಸಲ್ಪಟ್ಟಿದೆ. ಮಾನವ ಕುಲಕ್ಕೆ ಶ್ರೀಮದ್ ಭಗವದ್ ಗೀತೆಯನ್ನು ಕರುಣಿಸಿದ ಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ.

ಕೃಷ್ಣ ಜನ್ಮವು ಕತ್ತಲನ್ನು ದೂರ ಮಾಡಿ, ಜಗತ್ತನ್ನು ದುಷ್ಟ ಶಕ್ತಿಗಳಿಂದ ಮುಕ್ತಗೊಳಿಸಿದ ಸಂಕೇತ. ಶ್ರಾವಣ ಮಾಸದ ಕೃಷ್ಣಪಕ್ಷದ ಎಂಟನೇ ದಿನದಂದು (ಅಷ್ಟಮಿ) ಬರುವ ಕೃಷ್ಣ ಜನ್ಮಾಷ್ಟಮಿಯನ್ನು ದೇಶದಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.

ಕೃಷ್ಣ ಜನ್ಮಕ್ಕೆ ಪೌರಾಣಿಕ ಹಿನ್ನೆಲೆ ಇದೆ. ದುಷ್ಟ ಅಸುರೀಶಕ್ತಿಗಳು ಭೂ ಲೋಕದಲ್ಲಿ ದಾನವೀ ಕೃತ್ಯ ಎಸಗುತ್ತಿದ್ದಾಗ ಕಂಗೆಟ್ಟ ಭೂಮಿ ತಾಯಿಯು ಬ್ರಹ್ಮದೇವನ ಹತ್ತಿರ ಬಂದು ಸಂಕಷ್ಟದಿಂದ ಪಾರು ಮಾಡುವಂತೆ ಮೊರೆಯಿಡುತ್ತಾಳೆ. ಭೂ ದೇವಿಯ ಮನವಿಗೆ ಓಗೊಟ್ಟ ಬ್ರಹ್ಮನು ಮಹಾವಿಷ್ಣುವಿನ ಬಳಿಗೆ ತೆರಳಿ, ಅಸುರರ ಹಾವಳಿಯಿಂದ ಭೂ ಲೋಕವನ್ನು ಮುಕ್ತಗೊಳಿಸುವಂತೆ ವಿನಂತಿಸುತ್ತಾನೆ.

ಬ್ರಹ್ಮನಿಗೆ ನೀಡಿದ ವಚನದ ಅನುಸಾರ ಮಹಾವಿಷ್ಣುವು ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಕೃಷ್ಣನಾಗಿ ಜನ್ಮತಳೆಯುತ್ತಾನೆ. ಮಥುರಾ ನಗರದ ಸೆರೆಮನೆಯಲ್ಲಿ ದೇವಕಿ ಮತ್ತು ವಸುದೇವನ ಮಗನಾಗಿ ಕೃಷ್ಣನು ಜನಿಸುತ್ತಾನೆ. ಆಗ ಭೂಲೋಕದಲ್ಲಿ ದೈತ್ಯ ಶಕ್ತಿಗಳು ತಾಂಡವವಾಡುತ್ತಿರುತ್ತವೆ.

ಇಲ್ಲಿದ್ದರೆ ಕೃಷ್ಣನಿಗೆ ಅಪಾಯ ಎಂದು ಅರಿತ ವಸುದೇವನು ಕೃಷ್ಣನನ್ನು ಗೋಕುಲಕ್ಕೆ ಕರೆತಂದು ಯಶೋಧ ಮತ್ತು ನಂದನ ಬಳಿ ಬಿಡುತ್ತಾನೆ. ಶ್ರೀಕೃಷ್ಣನು ಭೂಲೋಕದಲ್ಲಿ ಜನ್ಮತಳೆದ ಸಂದರ್ಭದಲ್ಲಿ ಹಲವು ಶುಭ ಶಕುನಗಳಾಗುತ್ತವೆ. ಅಸುರರಿಗೆ ಅವ್ಯಕ್ತ ಭೀತಿ ಕಾಡುತ್ತದೆ. ಅಂಧಕಾರ ಮಾಯವಾಗಿ ದಿವ್ಯಜ್ಯೋತಿ ಬೆಳಗುತ್ತದೆ. ಇದರ ಸಂಕೇತವಾಗಿ ಆಸ್ತಿಕರು ಶ್ರದ್ಧಾ ಭಕ್ತಿಪೂರ್ವಕವಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇಡೀ ದಿನ ಉಪವಾಸವಿದ್ದು, ಕೃಷ್ಣ ಜನಿಸಿದ ಸಮಯಕ್ಕೆ ಸರಿಯಾಗಿ ಅಘ್ರ್ಯಪ್ರದಾನ ಮಾಡುತ್ತಾರೆ.

ಕೃಷ್ಣನದು ಅತ್ಯಂತ ಪ್ರಬಲವಾದ ಅವತಾರ. ಈ ಅವತಾರದ ಹುಟ್ಟು ಹಾಗೂ ನಿರ್ಗಮನದ ವಿಷಯವಾಗಿ ಹಲವು ವಿವರಗಳಿವೆ. ಈ ಅವತಾರವನ್ನು ಬಾಲಕೃಷ್ಣನ ರೂಪದಲ್ಲಿ ಪೂಜಿಸುತ್ತಾರೆ. ಆತನ ಬಾಲಲೀಲೆಗಳನ್ನು ಪರಿಪರಿಯಾಗಿ ಕೊಂಡಾಡುತ್ತಾರೆ. ಆನಂತರ ಕೃಷ್ಣನು ಧಾರ್ಮಿಕ ಗುರುವಾಗುತ್ತಾನೆ. ಅಧರ್ಮ ಮೆಟ್ಟಿ ಧರ್ಮದ ಸ್ಥಾಪನೆ ಮಾಡಿದ ಮಹಾ ಪುರುಷನಾಗುತ್ತಾನೆ.

ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷೃತಾಂ, ಧರ್ಮಸಂಸ್ಥಾಪನಾರ್ಥಾಯ, ಸಂಭವಾಮಿ ಯುಗೇ ಯುಗೇ

ಅಂದರೆ, ಸಾಧು ಸಜ್ಜನರ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಧರ್ಮಸಂಸ್ಥಾಪನೆ ಮಾಡುವ ಸಲುವಾಗಿ ಯುಗ ಯುಗದಲ್ಲೂ ಜನ್ಮ ತಳೆಯುತ್ತೇನೆ ಎಂದು ಕೃಷ್ಣನು ಹೇಳಿದ್ದಾನೆ. ಧರ್ಮರಕ್ಷಕನಾದ ಶ್ರೀಕೃಷ್ಣನ ಜನ್ಮದಿನ ಬಹಳ ಪವಿತ್ರ ದಿನ ಎಂದು ಭಕ್ತಜನರ ನಂಬಿಕೆ.

ಕೃಷ್ಣ ಜನ್ಮಾಷ್ಟಮಿಯನ್ನು ದೇಶದ ವಿವಿಧ ಭಾಗಗಳಲ್ಲಿ ವೈವಿಧ್ಯಪೂರ್ಣವಾಗಿ ಆಚರಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಭಕ್ತರು ಮೊಸರಿನ ಗಡಿಗೆಯನ್ನು ಒಡೆದು ಭಕ್ತಿ ಮೆರೆದರೆ, ಇತರ ಕಡೆ ರಾಸಲೀಲೆ ಆಡುತ್ತಾರೆ. ಎಲ್ಲೆಲ್ಲೂ ಭಕ್ತಿಯು ಮನೆ ಮಾಡಿರುತ್ತದೆ. ಕೃಷ್ಣನ ಕಥೆ, ಕೀರ್ತನೆಗಳ ಪಾರಾಯಣ ಆಗುತ್ತದೆ. ನಾಟಕ, ನೃತ್ಯಪ್ರದರ್ಶನ ನಡೆಯುತ್ತದೆ.

ಬಾಲಕೃಷ್ಣನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಗಂಗಾಜಲ, ತುಳಸಿ ಎಲೆಯಿಂದ ಅಭಿಷೇಕ ಮಾಡುತ್ತಾರೆ. ಅದನ್ನು ಪ್ರಸಾದದ ರೂಪದಲ್ಲಿ ವಿನಿಯೋಗಿಸುತ್ತಾರೆ.

ಗೋಕುಲಾಷ್ಟಮಿ ಯಂದು ದೇಶದ ಕೃಷ್ಣದೇಗುಲಗಳು ಬಗೆಬಗೆಯ ಅಲಂಕಾರದಿಂದ ಸಿಂಗರಿಸಲ್ಪಡುತ್ತವೆ. ಘಂಟಾನಾದ, ವೇದಘೋಷ ಮೊಳಗುತ್ತದೆ. ಧೂಪ, ದೀಪ, ನೈವೇದ್ಯದ ಪರಿಮಳ ಹರಡುತ್ತದೆ. ಕೃಷ್ಣನಿಗೆ ಇಷ್ಟವಾದ ಬಗೆ ಬಗೆಯ ಖಾದ್ಯಗಳ ನಿವೇದನೆ ಆಗುತ್ತದೆ. ಭಗವದ್ಗೀತೆಯ ಪಾರಾಯಣ ಮಾಡುತ್ತಾರೆ.

ಮಥುರಾ ಮತ್ತು ಬೃಂದಾವನದಲ್ಲಿ ಜನ್ಮಾಷ್ಟಮಿಯ ವೈಭವದ ವಿಶೇಷಗಳು ವರ್ಣಿಸಲಸದ್ಯ. ಇಡೀ ರಾತ್ರಿ ಸಂಭ್ರಮಾಚರಣೆ ಆಗುತ್ತದೆ. ಬೃಂದಾನವನದ ಬಾಂಕೆ ಬಿಹಾರಿ ದೇವಾಲಯ, ದ್ವಾರಕೆಯ ದ್ವಾರಕಾಧೀಶ ಮಂದಿರ, ಗುರುವಾಯೂರಿನ ಕೃಷ್ಣದೇಗುಲ, ಪುರಿಯ ಜಗನ್ನಾಥ ಮಂದಿರ, ತಮಿಳುನಾಡಿನ ರಾಜಗೋಪಾಲಸ್ವಾಮಿ ದೇವಸ್ಥಾನ, ನಾಥದ್ವಾರದ ಶ್ರೀನಾಥಜಿ ಮಂದಿರಗಳು ಪೌರಾಣಿಕ ಪ್ರಾಮುಖ್ಯತೆ ಪಡೆದಿದ್ದು, ಇಲ್ಲಿ ಜನ್ಮಾಷ್ಟಮಿಯ ಆಚರಣೆ ಅತ್ಯಂತ ವೈಭವಪೂರ್ಣವಾಗಿ ನೆರವೇರುತ್ತದೆ.

ಉಡುಪಿಯ ಶ್ರೀಕೃಷ್ಣ ದೇಗುಲದಲ್ಲಿ ಕಡೆಗೋಲು ಕೃಷ್ಣನಮೂರ್ತಿಗೆ ವಿಶೇಷ ಪೂಜೆ ಸಲ್ಲುತ್ತದೆ. ಒಂದೂವರೆ ಸಾವಿರ ವರ್ಷಗಳ ಐತಿಹ್ಯ ಹೊಂದಿರುವ ಉಡುಪಿಯ ಶ್ರೀಕೃಷ್ಣ ದೇಗುಲಕ್ಕೆ ಅತ್ಯಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರದರ್ಶನ ಮಾಡಿ ಪುನೀತರಾಗುತ್ತಾರೆ.

ಕೃಷ್ಣನ ಪೂಜೆಯು ಸಾಮಾನ್ಯವಾಗಿ ರಾತ್ರಿ 11.57ಕ್ಕೆ ಪ್ರಾರಂಭವಾಗುತ್ತದೆ.ಆ ಘಳಿಗೆಯವರೆಗೆ ಇಡೀ ದಿನ ದೇವತಾ ಮೂರ್ತಿಗೆ ಪೂಜೆ ನಡೆಯುತ್ತದೆ. ಕೆಲವು ಭಕ್ತರು ಉಪವಾಸವಿದ್ದು, ಪೂಜೆಯಲ್ಲಿ ಪಾಲ್ಗೊಂಡು ಕೃಷ್ಣ ಜನನದ ನಂತರ ಪ್ರಸಾದ ಸೇವನೆ ಮಾಡುತ್ತಾರೆ.

# ಪೂಜಾವಿಧಿಗಳು ಹೀಗಿವೆ.
* ಜನ್ಮಾಷ್ಟಮಿಯಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಚೀಭೂತರಾಗಿ ಹೊಸ ವಸ್ತ್ರ ಧರಿಸಬೇಕು.
* ಬೇಳೆ, ಕಾಳು, ಧಾನ್ಯದಿಂದ ಕೂಡಿದ ಆಹಾರ ಸೇವಿಸದೆ ಉಪವಾಸ ಮಾಡಬೇಕು.
* ಪೂಜಾಸ್ಥಳವನ್ನು ಶುದ್ಧಿಗೊಳಿಸಿ, ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಹಾಲು, ಮೊಸರು, ತುಪ್ಪ, ಜೇನುತುಪ್ಪದಿಂದ ಅಭಿಷೇಕ ಮಾಡಬೇಕು.
* ಅಭಿಷಕದ ನಂತರ ಕೃಷ್ಣನ ವಿಗ್ರಹಕ್ಕೆ ಹೊಸ ವಸ್ತ್ರ, ಒಡವೆಗಳ ಧಾರಣೆ ಮಾಡಬೇಕು.
* ಕೃಷ್ಣನ ಜನನದ ಘಳಿಗೆಯಲ್ಲಿ ವಿಗ್ರಹಕ್ಕೆ ಆರತಿ ಮಾಡಬೇಕು. ಆನಂತರ ಪ್ರಸಾದ ಸೇವನೆ.
* ಇದು ಸಾಮಾನ್ಯ ಭಕ್ತರ ಮನೆಯಲ್ಲಿ ನಡೆಯುವ ಆಚರಣೆ 700 ಶ್ಲೋಕಗಳಿಂದ ಕೂಡಿದ ಭಗವದ್ಗೀತೆಯನ್ನು ಕರುಣಿಸಿದ ಶ್ರೀಕೃಷ್ಣನ ಜನ್ಮದಿನಾಚರಣೆ ಮಾಡುವುದರಿಂದ ಪಾಪಪರಿಹಾರವಾಗಿ ಮುಕ್ತಿ ಲಭಿಸುತ್ತದೆ ಎಂಬ ನಂಬಿಕೆ ಇದೆ.

ಸಮಸ್ತ ಸನ್ಮಂಗಳಾನಿ ಭವಂತು.

– ಎನ್.ಎಸ್.ರಾಮಚಂದ್ರ

Facebook Comments