100 ಅಡಿಗೆ ತಲುಪಲಿದ KRS ಜಲಾಶಯದ ನೀರಿನ ಮಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು ಕಾವೇರಿ ನದಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣರಾಜ ಸಾಗರ (ಕೆಆರ್ ಎಸ್)ಜಲಾಶಯದ ನೀರಿನ ಮಟ್ಟ 100.33 ಅಡಿಗೆ ತಲುಪಿದೆ.
ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.

ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳು ಸೇರಿದಂತೆ ಜಲಾನಯನ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನಿನ್ನೆಯವರೆಗೆ ಕೆಆರ್ ಎಸ್ ಜಲಾಶಯದಲ್ಲಿ 99.40 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಇಂದು 100.33 ಅಡಿಗೆ ಏರಿಕೆಯಾಗಿದೆ.

ಜಲಾಶಯದ ಒಳ ಹರಿವು 8 ಸಾವಿರ ಕ್ಯುಸೆಕ್ಸ್ ಗೂ ಹೆಚ್ಚಿನ‌ ಪ್ರಮಾಣದಲ್ಲಿದೆ. ಜಲಾನಯನ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣ ಮತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.‌ ಕಳೆದ ವರ್ಷ ಇದೇ ಅವಧಿಯಲ್ಲಿ‌ 83.65 ಅಡಿಗಳಷ್ಟು ನೀರಿತ್ತು.

ಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿಗಳು. ಇದೇ ರೀತಿ ಹಾರಂಗಿ, ಹೇಮಾವತಿ ಹಾಗೂ ಕಬಿನಿ ಜಲಾಶಯಗಳಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ‌ ಪ್ರಮಾಣದ ನೀರಿದೆ. ಹೀಗಾಗಿ ಈ ವರ್ಷವೂ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.

ಹಾರಂಗಿ ಜಲಾಶಯಕ್ಕೆ ಸು‌. ನಾಲ್ಕು ಸಾವಿರ ಕ್ಯುಸೆಕ್ಸ್ ಒಳ ಹರಿವಿದ್ದರೆ, ಹೇಮಾವತಿ ಜಲಾಶಯಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಕ್ಯುಸೆಕ್ಸ್ ನಷ್ಟು ಒಳ ಹರಿವಿದೆ. ಕಬಿನಿ ಜಲಾಶಯಕ್ಕೂ ಹನ್ನೊಂದು ಸಾವಿರಕ್ಕೂ ಹೆಚ್ಚು‌ ಕ್ಯುಸೆಕ್ಸ್ ಒಳ ಹರಿವಿದೆ. ಇದೇ ರೀತಿ ಮಳೆ ಮುಂದುವರೆದರೆ ಸಕಾಲದಲ್ಲಿ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳಿವೆ.

# ಒಳನಾಡಿನಲ್ಲಿ ಮಳೆ ಹೆಚ್ಚಳ
ಬಂಗಾಳಕೊಲ್ಲಿಯಲ್ಲಿ ಟ್ರಪ್ ಉಂಟಾಗಿರುವುದರಿಂದ ಬೆಂಗಳೂರು ಸೇರಿದಂತೆ ಒಳನಾಡಿನಲ್ಲಿ ಮಳೆ ಹೆಚ್ಚಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಕರಾವಳಿ ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ ರಾಜ್ಯಾದ್ಯಂತ ಚದುರಿದಂತೆ ಮಳೆಯಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗೂ ಅನುಕೂಲವಾಗಿದೆ ಎಂದು ಹೇಳಿದರು.

ಹವಾ ಮುನ್ಸಾಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು, ರಾಜ್ಯದ ದಕ್ಷಿಣ ಒಳನಾಡುವಿನ ಹಲವು ಭಾಗಗಳಲ್ಲಿ ಮುಂಗಾರು ಮಳೆ ಹೆಚ್ಚಾಗಲಿದೆ ಎಂದರು.

Facebook Comments

Sri Raghav

Admin