ತಮಿಳುನಾಡಿಗೆ ಈಗಾಗಲೇ 28ಟಿಎಂಸಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

KRS--01

ಬೆಂಗಳೂರು, ಜು.14- ಕಾವೇರಿ ಜಲಾನಯನ ಭಾಗದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಿದ್ದ ಪರಿಣಾಮ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ತಮಿಳುನಾಡಿಗೆ ಈಗಾಗಲೇ 28ಟಿಎಂಸಿ ಅಡಿಗೂ ಹೆಚ್ಚು ನೀರು ಹರಿದು ಹೋಗಿದೆ. ಕೆಆರ್‍ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಬಹಹುತೇಕ ಭರ್ತಿಯಾಗಿದ್ದು, ಯಾವುದೇ ಸಂದರ್ಭದಲ್ಲಿ ಬೇಕಾದರೂ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹೊರ ಬಿಡಲಾಗುತ್ತದೆ. ಜಲಾಶಯಗಳ ಕೆಳಭಾಗದ ನದಿ ಪಾತ್ರದಲ್ಲಿರುವ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.

ಕೆಆರ್‍ಎಸ್ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.  ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ 40.5ಟಿಎಂಸಿ ಅಡಿ ನೀರನ್ನು ಬಿಡಬೇಕಾಗಿದೆ. ಆದರೆ, ನಿನ್ನೆಯವರೆಗೆ 28 ಟಿಎಂಸಿ ಅಡಿ ನೀರು ಬಿಡಲಾಗಿದೆ. ಜಲಾಶಯಗಳು ಭರ್ತಿಯಾಗುತ್ತಿರುವುದರಿಂದ ಒಂದೆರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುತ್ತದೆ.

ಇದರಿಂದ ಶ್ರೀರಂಗಪಟ್ಟಣ, ಟಿ.ನರಸೀಪುರ ಸೇರಿದಂತೆ ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಜುಲೈ ತಿಂಗಳ ಅಂತ್ಯದ ವೇಳೆಗೆ ರಾಜ್ಯದಿಂದ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಡುಗಡೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿವೆ.
ಜೂನ್‍ನಲ್ಲಿ 9.5 ಟಿಎಂಸಿ ಅಡಿ ಹಾಗೂ ಜುಲೈನಲ್ಲಿ 31 ಟಿಎಂಸಿ ಅಡಿ ನೀರನ್ನು ಬಿಡಬೇಕಾಗಿದೆ. ಈಗಾಗಲೇ ಮೆಟ್ಟೂರು ಜಲಾಶಯದಲ್ಲಿ ನೀರಿನ ಸಂಗ್ರಹದ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೇಮಾವತಿ ಜಲಾಶಯದಲ್ಲಿ 2919.37 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಒಳ ಅರಿವು 24,743 ಕ್ಯೂಸೆಕ್ಸ್ ಇದೆ. ಒಂದೆರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಜಲಾಶಯವು ಭರ್ತಿಯಾಗಲಿದೆ. ಈಗಾಗಲೇ ಹಾರಂಗಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ.

ಕೆಆರ್‍ಎಸ್ ತುಂಬಲು 2 ಅಡಿ ಬಾಕಿ:
ಕೃಷ್ಣರಾಜ ಸಾಗರ ಭರ್ತಿಗೆ ಕೇವಲ 2 ಅಡಿ ನೀರು ಮಾತ್ರ ಬಾಕಿ ಇದೆ. ಕೆಆರ್‍ಎಸ್‍ನ ಇಂದಿನ ನೀರಿನ ಮಟ್ಟ 122.70 ಅಡಿಗಳಷ್ಟಿದ್ದು, ಗರಿಷ್ಠ ಮಟ್ಟ 124.80 ಅಡಿಗಳು. ಇದು ಭರ್ತಿಯಾಗಲು ಇನ್ನು 2 ಅಡಿ ನೀರು ಮಾತ್ರ ತುಂಬಬೇಕಾಗಿದೆ. ಕೊಡಗು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 49.968 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಕೆಆರ್‍ಎಸ್‍ನಿಂದ 4,044 ಕ್ಯೂಸೆಕ್ ನೀರು ಮಾತ್ರ ಹೊರಬಿಡಲಾಗುತ್ತಿದೆ.

ಸದ್ಯದಲ್ಲಿಯೇ ರಾಜ್ಯ ಸರ್ಕಾರ ಈ ನಾಲ್ಕು ಜಲಾಶಯಗಳಿಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ರಾಜ್ಯದ ಒಳನಾಡಿನಲ್ಲೂ ಕೂಡ ಉತ್ತಮವಾದ ಮಳೆ ವ್ಯಾಪಕ ಪ್ರಮಾಣದಲ್ಲಿ ಆಗುತ್ತಿಲ್ಲ. ಕೆಲವೆಡೆ ಒಳ್ಳೆಯ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಒಣಹವೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin