ಕೈ ಬಿಸಿ ಕರೆಯುತ್ತಿದೆ ಕೆಆರ್‌ಎಸ್, ನೋಡುಗರ ಕಣ್ಣಿಗೆ ಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

KRS-4

ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರು ನಾಡಿನ ಬಗೆಗಿನ ದೂರದೃಷ್ಟಿಯಿಂದ ಹಲವಾರು ಪ್ರದೇಶಗಳಿಗೆ ನೀರೊದಗಿಸುವ ಕೃಷ್ಣರಾಜಸಾಗರ ನಿರ್ಮಿಸಿಕೊಟ್ಟ ಅನ್ನದಾತರು.  ಮೈಸೂರು , ಮಂಡ್ಯ, ಬೆಂಗಳೂರು ಸೇರಿದಂತೆ ದೇಶ ವಿದೇಶಗಳ ಜನರು ಅದನ್ನು ನೋಡುವುದೇ ಒಂದು ಸುಯೋಗ.
ಅಂದಿನ ಕಾಲಕ್ಕೆ ಕನ್ನಂಬಾಡಿ ಎಂಬುದು ಕಾವೇರಿ ನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ. ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ, ಮನ್ನಂಬಾಡಿ, ಕಣ್ಣಂಬಾಡಿ , ಕೆಆರ್‍ಎಸ್ ಎಂಬ ವಿಭಿನ್ನ ಹೆಸರಿಯಿಂದಲೂ ಗುರುತಿಸುವಂತಾಯಿತು.

ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಣೆಕಟ್ಟು ನಿರ್ಮಿಸಲಾಗಿದ್ದು,ಕಾವೇರಿ ನದಿಗೆ ಎಂದು ಇತಿಹಾಸ ಹೇಳುತ್ತದೆ. ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣದ ಹಿಂದೆ ಸ್ವಾರಸ್ಯಕರ ಕಥೆಗಳಿವೆ. ಬಹಳ ಹಿಂದೆ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಗ್ರಾಮದಲ್ಲಿ ಮೈಸೂರು ದೊರೆ ಕೃಷ್ಣರಾಜರು ಕುದುರೆ ಏರಿ ಬರುತ್ತಿದ್ದಾಗ ನದಿಯ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ಹಾಗೂ ಎಲ್ಲೆಲ್ಲೂ ಹುರುಳಿ ಬೆಳೆಯುವ ಹೊಲ ಕಂಡು ಬೇಸರಪಟ್ಟು ನೀರಿನ ಸದ್ಬಳಕೆಗೆ ಆಲೋಚಿಸಿ ಅಡ್ಡಲಾಗಿ ನದಿಗೆ ಕಟ್ಟೆಯೊಂದನ್ನು ಕಟ್ಟಿಸಿದನು. ಕೃಷ್ಣರಾಜ ಸಾಗರ ಎಂಬ ಯಶೋಗಾಥೆಯಾಗಿ ಮಂಡ್ಯ ಜಿಲ್ಲೆಯನ್ನು ಅಕ್ಕರೆಯ ಸಕ್ಕರೆಯ ಜಿಲ್ಲೆಯನ್ನಾಗಿಸಿರುವುದು ಕಣ್ಮುಂದಿನ ಸತ್ಯ ಎಂದು ಹಿರಿಯರು ಹೇಳುತ್ತಾರೆ.

KRS-3

ಈ ಜಲಾಶಯದ ನಿರ್ಮಾಣದ ಹಿಂದೆ ಸಾವಿರಾರು ಜನರ ಬೆವರಿದೆ. ಅಣೆಕಟ್ಟೆ ನಿರ್ಮಾಣಕ್ಕಾಗಿ 25 ಗ್ರಾಮಗಳು ಮುಳುಗಡೆಯಾಗಿ 15000ಕ್ಕೂ ಹೆಚ್ಚು ಜನರು ತಮ್ಮ ಆಸ್ತಿ, ಪಾಸ್ತಿ ಕಳೆದುಕೊಂಡಿದ್ದರು. ನಾಡಿನ ಜನರ ನೀರಿನ ಬವಣೆ ನೀಗಿಸಿದ ಸ್ಮರಣೀಯರು ಅರಸರು. ಕನ್ನಂಬಾಡಿ ಅಣೆಕಟ್ಟನ್ನು ಕಪ್ಪು ಗ್ರಾನೈಟ್ ಕಲ್ಲುಗಳು, ಮುರುಡ ಕಲ್ಲುಗಳು, ಸುರಕಿ ಗಾರೆಗಳು ಮುಂತಾದವುಗಳನ್ನು ಬಳಸಿ ನಿರ್ಮಿಸಲಾಗಿದೆ. ಕೆಆರ್‍ಎಸ್ ನಿರ್ಮಾಣ ಸಂದರ್ಭದಲ್ಲಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರೊಡನೆ ಬಿ.ಸುಬ್ಬುರಾವ್ ಸರ್.ಮಿರ್ಜಾ ಇಸ್ಮಾಯಿಲ್ ಟಿ.ಆನಂದರಾವ್ ಮತ್ತಿತರರ ಸಹಕಾರದಿಂದ ಅಣೆಕಟ್ಟನ್ನು 1932ರಲ್ಲಿ ಪೂರ್ಣಗೊಳಿಸಲಾಯಿತು.

ಇಂತಹ ರೋಚಕ ಇತಿಹಾಸದೊಂದಿಗೆ ಮೈದಳೆದ ಜಲಾಶಯ ಈ ಬಾರಿ ಉತ್ತಮ ಮಳೆಯಿಂದ ಭರ್ತಿಯಾಗಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಈ ಅಣೆಕಟ್ಟೆಗೆ ಹೊಂದಿಕೊಂಡಂತೆ ಕಟ್ಟಲಾದ ಬೃಂದಾವನ ಉದ್ಯಾನವನ, ಪ್ರಸಿದ್ಧವಾದುದು ಸಂಗೀತ ಕಾರಂಜಿ ಪ್ರವಾಸಿಗರನ್ನು ಅನೇಕ ದಶಕಗಳಿಂದ ಆಕರ್ಷಿಸುತ್ತಿದೆ. ಬೃಂದಾವನ ಉದ್ಯಾನವನದಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಒಂದು ತಂಗುದಾಣವೂ ಇದ್ದು, ಎಲ್ಲಾ ಪ್ರವಾಸಿಗರಿಗೂ ಸೌಲಭ್ಯ ಕಲ್ಪಿಸುತ್ತಿವೆ. ಇಷ್ಟೆಲ್ಲ ಇತಿಹಾಸವನ್ನು ಮೆಲುಕು ಹಾಕಲು ಕಾರಣವಾಗಿದ್ದು ನಾವು ಕೈಗೊಂಡ ಪ್ರವಾಸದಿಂದಾಗಿ. ಅಣೆಕಟ್ಟೆಯಲ್ಲಿ ನೀರು ತುಂಬಿ ಮೂಡಿಸಿರುವ ಮನಮೋಹಕ ದೃಶ್ಯ ಎಂದಿಗೂ ಮರೆಯಲಾರದ ಅನುಭವವೇ ಸರಿ.

KRS-2

ಇತ್ತೀಚೆಗಷ್ಟೇ ಪ್ರಥಮ ಬಾರಿಗೆ ನನ್ನ ನೆಚ್ಚಿನ ಗುರುಗಳು ಹಾಗೂ ಸ್ನೇಹಿತರೊಂದಿಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟನ್ನು ವೀಕ್ಷಿಸಿದ್ದು ಒಂದು ಅವಿಸ್ಮರಣೀಯ ಅನುಭವ. ಮುಂಗಾರಿನ ಅಬ್ಬರಕ್ಕೆ ಕಾವೇರಿ ಜೀವಕಳೆ ತುಂಬಿಸಿಕೊಂಡು ನಲಿಯತ್ತಿರುವ ಮನಮೋಹಕ ದೃಶ್ಯ ಕಂಡು ನಾನು ಒಂದು ಕ್ಷಣ ಮೂಖ ವಿಸ್ಮಿತವಾಗಿ ಬೆರಗಾಗಿ ನಿಂತೆನು. ಏಕೆಂದರೆ ಅಷ್ಟು ಸೊಗಸಾಗಿ ಕಾವೇರಿ ನದಿ ನರ್ತಿಸುತ್ತಿತ್ತು. ಒಂದೆಡೆ ಕರುನಾಡ ಜೀವನದಿ ತನ್ನ ಸೌಂದರ್ಯದಿಂದ ಅಲ್ಲಿನ ಎಲ್ಲ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಮತ್ತೊಂದೆಡೆ ಅಣೆಕಟ್ಟೆ ಕೆಳಭಾಗದಲ್ಲಿರುವ ಬೃಂದಾವನ, ವಿದ್ಯುತ್ ದೀಪಾಲಂಕಾರದ ಸಂಗೀತ ನೃತ್ಯ ಕಾರಂಜಿಯು ಎಲ್ಲಾ ವಯೋಮಾನದ ಜನರ ಕಣ್ಮನವನ್ನು ಮುದಗೊಳಿಸುತ್ತಿವೆ.

ಈ ಉದ್ಯಾನವನದಲ್ಲಿ ನಮ್ಮ ತಂಡದವರು, ಪ್ರವಾಸಿಗರೆಲ್ಲರೂ ಭಿನ್ನ ಭಿನ್ನ ರೂಪದ ಶೈಲಿಯಲ್ಲಿ ಫೋಟೊ ತೆಗೆಸಿಕೊಂಡು ಸಂತಸದಿಂದ ಸ್ವಲ್ಪ ಹೊತ್ತು ಕಳೆದೆವು. ನಂತರ ಅಲ್ಲಿನ ರುಚಿಕರ ತಿಂಡಿ-ತಿನಿಸುಗಳನ್ನು ಸವಿದೆವು. ಸುಂದರ ಪ್ರವಾಸದ ನೆನಪನ್ನು ಮೆಲುಕು ಹಾಕುತ್ತಾ ಬೆಂಗಳೂರಿಗೆ ಹಿಂದಿರುಗಿದೆವು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin