ಕೆಆರ್‌ಎಸ್ ನೀರಿನ ಮಟ್ಟ ಇಳಿಕೆ: ಬೆಂಗಳೂರಿಗರಿಗೆ ಎದುರಾಗಲಿದೆ ನೀರಿನ ಅಭಾವ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.27- ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಪ್ರಮುಖ ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವ ಪರಿಣಾಮ ನೀರಿನ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್‍ಎಸ್ ಅಣೆಕಟ್ಟು ಬೆಂಗಳೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಚಾಮರಾಜನಗರ ಸೇರಿದಂತೆ ಮತ್ತಿತರ ಭಾಗಗಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಆಧಾರ ಸ್ತಂಭವಾಗಿದೆ.

ಆದರೆ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಕೆಆರ್‍ಎಸ್ ಜಲಾಶಯದ ಒಟ್ಟು ನೀರಿನ ಸಂಗ್ರಹಣೆ ಸಾಮಥ್ರ್ಯ 124.8 ಅಡಿ. ಪ್ರಸ್ತುತ ಜಲಾಶಯದಲ್ಲಿ 90.04 ಅಡಿಯಷ್ಟು ನೀರು ಸಂಗ್ರಹವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಈ ಬಾರಿ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನಕ್ಕೆ ಜಲಾಶಯದಲ್ಲಿ 73.43 ಅಡಿಯಷ್ಟು ನೀರು ಸಂಗ್ರಹವಾಗಿತ್ತು.

ಕಳೆದ ವರ್ಷ ಮೇ ತಿಂಗಳಿನಲ್ಲಿ ಕೆಆರ್‍ಎಸ್ ಜಲಾಶಯದಿಂದ ಕುಡಿಯುವ ನೀರನ್ನೇ ಪೂರೈಕೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರು ಕನಿಷ್ಠ ಅಂದರೆ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿತ್ತು.

ಸಾಮಾನ್ಯವಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಡೆಡ್ ಸ್ಟೋರೇಜ್ ತಲುಪಿದರೆ ಅದನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಬಾರಿ ಆತಂಕಪಡುವ ಅಗತ್ಯವಿಲ್ಲವಾದರೂ ಮಳೆಗಾಲ ಪ್ರಾರಂಭವಾಗಲು ಇನ್ನು ಕೆಲವು ದಿನಗಳು ಬಾಕಿ ಇವೆ.

ಸದ್ಯಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಾರಾದರೂ ಈ ಬಾರಿ ಸರಾಸರಿ ಪ್ರಮಾಣದ ಮುಂಗಾರು ಮಳೆ ಮಾತ್ರ ಬರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜಧಾನಿ ಬೆಂಗಳೂರು ಮಹಾನಗರ ಒಂದಕ್ಕೆ ಕನಿಷ್ಟಪಕ್ಷ ಎರಡೂವರೆಯಿಂದ 3 ಟಿಎಂಸಿ ನೀರು ಬೇಕಾಗುತ್ತದೆ. ಇನ್ನು ಇದೇ ನೀರಿನ ಮೇಲೆ ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಜನತೆ ಅವಲಂಬಿತವಾಗಿರುವುದರಿಂದ ಅವರಿಗೂ ಕೂಡ ಯಥಾಪ್ರಕಾರವಾಗೇ ನೀರನ್ನು ಪೂರೈಕೆ ಮಾಡಬೇಕಾಗುತ್ತದೆ.

ಕಳೆದ ವರ್ಷ ಕಾವೇರಿ ಜಲಾನಯನ ತೀರಾ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಕೆ ಮಾಡಿಕೊಳ್ಳದಂತೆ ಮನವಿ ಮಾಡಿಕೊಳ್ಳಲಾಗಿತ್ತು. ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಈ ನೀರನ್ನೇ ಬಳಸಿಕೊಂಡರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಈ ದೃಢ ನಿಲವು ತೆಗೆದುಕೊಂಡಿತ್ತು.

ಆರಂಭವಾಗದ ಮುಂಗಾರು: ಸಾಮಾನ್ಯವಾಗಿ ವಾಡಿಕೆಯಂತೆ ಏಪ್ರಿಲ್ ತಿಂಗಳ ಕೊನೆಯ ವಾರಕ್ಕೆ ಕೇರಳದಲ್ಲಿ ಮುಂಗಾರು ಪ್ರವೇಶ ಆರಂಭವಾಗಿ ಮಳೆಯಾಗುತ್ತಿತ್ತು. ಕೇರಳದಲ್ಲಿ ಮಳೆಯಾಗದೆ ಕಾವೇರಿ ನದಿಯ ಮೂಲಸ್ಥಾನವಾದ ಕೊಡಗಿನಲ್ಲೂ ಮಳೆಯಾಗಿ ಜಲಾಶಯಕ್ಕೆ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದುಬರುತ್ತಿತ್ತು.

ಇನ್ನೇನು ಮೇ ತಿಂಗಳು ಆರಂಭವಾಗಲು ಎರಡೇ ದಿನಗಳು ಬಾಕಿ ಇದ್ದರೂ ಮುಂಗಾರು ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದು ಸಹಜವಾಗಿ ರೈತರಲ್ಲಿ ಆತಂಕ ತಂದೊಡ್ಡಿದೆ.

ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಿದ್ದರೂ ಮುಂದಿನ ದಿನಗಳು ಮಾತ್ರ ಕಠಿಣವಾಗುವ ಸಾಧ್ಯತೆ ಇದೆ.
ಹೀಗಾಗಿ ಸಾರ್ವಜನಿಕರು ಯಥೇಚ್ಛವಾಗಿ ನೀರನ್ನು ಅನಗತ್ಯವಾಗಿ ಖರ್ಚು ಮಾಡದೆ ಅಗತ್ಯ ತಕ್ಕಂತೆ ಬಳಸಿಕೊಳ್ಳಲು ಸರ್ಕಾರ ಮನವಿ ಮಾಡಿದೆ.

Facebook Comments