ಗ್ರಂಥಾಲಯ ಮೇಲ್ವಿಚಾರಕರ ವೇತನ ಹೆಚ್ಚಳಕ್ಕೆ ಕ್ರಮ : ಸಚಿವ ಕೆ.ಎಸ್. ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯ ಮೇಲ್ವಿಚಾರಕರ ಕನಿಷ್ಠ ವೇತನವನ್ನು ಹೆಚ್ಚಳ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.

ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯಗಳನ್ನು ಮುಚ್ಚಲು ಬಿಡುವುದಿಲ್ಲ. ಮೇಲ್ವಿಚಾರಕರಿಗೆ ಕನಿಷ್ಠ ವೇತನ ನೀಡಲು ಸಧ್ಯದಲ್ಲೇ ಸಿಎಂ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು. ವಿಧಾನ ಪರಿಷತ್‍ನಲ್ಲಿ ಎಂ.ಕೆ. ಪ್ರಾಣೇಶ್ ಪರವಾಗಿ ಸುನಿಲ್ ಸುಬ್ರಮಣ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸುಮಾರು 6773 ಗ್ರಂಥಾಲಯ ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವರಿಗೆ ಕನಿಷ್ಠ 13,200 ರೂ. ವೇತನ ಹಾಗೂ 8 ಗಂಟೆ ಕೆಲಸ ಮಾಡಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದರು. ಹಿಂದಿನ ಸರ್ಕಾರ ಈ ಮೇಲ್ವಿಚಾರಕರಿಗೆ 7,200 ರೂ. ಕನಿಷ್ಠ ವೇತನ ಹಾಗೂ 4 ಗಂಟೆ ಕೆಲಸವನ್ನು ನಿಗದಿ ಪಡಿಸಿತ್ತು. ನಮ್ಮ ಸರ್ಕಾರ ಅವರಿಗೆ 13,200 ರೂ. ವೇತನ, 8 ಗಂಟೆ ಕೆಲಸ ನಿಗದಿ ಮಾಡಬೇಕು, ವೇತನ ಹೆಚ್ಚಳ ಮಾಡುವಂತೆ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಮತ್ತೊಮ್ಮೆ ನಾನು ಮುಖ್ಯಮಂತ್ರಿಗಳು ಹಾಗು ಅಧಿಕಾರಿಗಳ ಮನ ವೊಲಿಸುತ್ತೇನೆ.

30 ವರ್ಷ ಕೆಲಸ ಮಾಡರುವವರಿಗೆ ಕನಿಷ್ಠ ವೇತನ ನೀಡದಿದ್ದರೆ ಹೇಗೆ? ನಾನು ಬಡತನದಿಂದ ಬಂದವನೆ… ನನಗೆ ಅವರ ಕಷ್ಟ ಅರ್ಥವಾಗುತ್ತದೆ. ಹಿಂದಿನ ಸರ್ಕಾರ ಯಾವುದಾದರೊಂದು ಕ್ರಮ ಕೈಗೊಂಡಿದ್ದರೆ ಇಂದು ಈ ರೀತಿಯ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು.ಅನೇಕ ಸದಸ್ಯರು ಇದೇ ವಿಷಯದ ಮೇಲೆ ಮಾತನಾಡಿದರು. ಭೋಜೇಗೌಡ, ಮರಿತಿಬ್ಬೇಗೌಡ, ಆಯನೂರು ಮಂಜುನಾಥ್, ಪ್ರಸನ್ನಕುಮಾರ್ ಮತ್ತಿತರರು ಮಾತನಾಡಿದರು.

Facebook Comments