ನಾನು ರೆಬಲ್ ಅಲ್ಲ ಲಾಯಲ್ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.2- ನಾನು ರೆಬಲ್ ಅಲ್ಲ, ಪಕ್ಷಕ್ಕೆ ಯಾವತ್ತೂ ಲಾಯಲ್ ಆಗಿದ್ದೇನೆ. ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿಲ್ಲ. ನನ್ನ ಗಮನಕ್ಕೆ ತಾರದೆ ಹಣ ಬಿಡುಗಡೆ ಮಾಡಿರುವುದಕ್ಕೆ ಪತ್ರ ಬರೆದಿದ್ದೇನೆ ಅಷ್ಟೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇಲಾಖೆಯ ಪೋಸ್ಟ್‍ಮ್ಯಾನ್ ಅಲ್ಲ, ನನ್ನ ಇಲಾಖೆಯ ಅನುದಾನ ಹಂಚಿಕೆ ಅಧಿಕಾರ ನಮಗೆ ಸಂಬಂಧಪಟ್ಟಿದ್ದು. ಇದರಲ್ಲಿ ಬೇರೆಯವರು ಮೂಗು ತೂರಿಸಬಾರದು ಎಂದು ಅವರು ಹೇಳಿದರು.

ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿರುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ನನ್ನ ಗಮನಕ್ಕೆ ತಾರದೆ, ನಿಯಮಾವಳಿಗಳನ್ನು ಪಾಲನೆ ಮಾಡದೆ ಹಣ ಬಿಡುಗಡೆಗೆ ಆದೇಶಿಸಲಾಗಿದೆ. ನೀತಿ-ನಿಯಮ ಮೀರಿ ಬೇರೊಬ್ಬರು ಹಣ ಬಿಡುಗಡೆ ಮಾಡುವುದು ಎಷ್ಟು ಸರಿ ಎಂಬ ಕುರಿತು ಮಾತ್ರ ಪತ್ರ ಬರೆದಿದ್ದೇನೆಯೇ ಹೊರತು ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಲ್ಲೂ ಹೇಳಿಲ್ಲ.

ಹೈಕಮಾಂಡ್ ನಾಯಕರಿಗೂ ಕೂಡ ಈ ಕುರಿತು ಪತ್ರ ಬರೆದಿದ್ದೇನೆ. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ನನ್ನ ಯಾವ ತರಕಾರು ಇಲ್ಲ. ಆದರೆ, ನಿಯಮಾವಳಿಗಳು ಪಾಲನೆ ಆಗಿಲ್ಲ. ಇಲಾಖೆಯ ಹಣವನ್ನು ಯಾವ ರೂಪದಲ್ಲಿ ಬಳಸಬೇಕು ಎಂಬ ಬಗ್ಗೆ ಆಯಾ ಸಚಿವರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಬಜೆಟ್ ಪೂರ್ವ ಸಭೆಯಲ್ಲೂ ಚರ್ಚೆಯಾಗಿರುತ್ತದೆ. ಹಣ ಬಿಡುಗಡೆ ವಿಚಾರದಲ್ಲಿ ವ್ಯತ್ಯಾಸವಾಗಿದೆ. ಅದನ್ನು ಸರಿಪಡಿಸಿ ಎಂದು ಪತ್ರ ಬರೆದಿದ್ದೇನೆ ಎಂದು ಹೇಳಿದರು.

ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ ಎಂದು ಹಲವು ಶಾಸಕರು, ಸಂಸದರು, ಸಚಿವರು, ಪಕ್ಷದ ಪದಾಧಿಕಾರಿಗಳು ನನಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ನನ್ನ ಮತ್ತು ಯಡಿಯೂರಪ್ಪ ನಡುವಿನ ಸಂಬಂಧ ಹಳಸಿಲ್ಲ. ನಾವಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡಿದವರು, ಬಿಜಿನೆಸ್ ಪಾಟ್ನರ್ಸ್. ನಾನು ವಿಚಾರ, ಸಿದ್ಧಾಂತ ಒಪ್ಪಿಕೊಂಡು ಬಂದವನು. ಆದರೆ, ಅವರು ಬೇಡ ಎಂದರೂ ಕೆಜೆಪಿ ಪಕ್ಷ ಕಟ್ಟಿದರು. ಅವರ ಸುತ್ತಮುತ್ತ ಇದ್ದವರು ದಾರಿ ತಪ್ಪಿಸಿದರು. ಆಗ ನಮ್ಮ ಪಕ್ಷಕ್ಕೂ ತೊಂದರೆಯಾಯಿತು. ಈಗಲೂ ಅಂಥವರಿಂದ ವ್ಯತ್ಯಾಸವಾಗುತ್ತಿರಬಹುದು ಎಂದು ಹೇಳಿದರು.

ಕೆಜೆಪಿ ಕಟ್ಟಿದಾಗ ನಾವು ಸುಮ್ಮನಿರಬೇಕೆ, ಅವರನ್ನು ಬೆಂಬಲಿಸಬೇಕೆ, ನಾನು ಪಕ್ಷ ಸಿದ್ಧಾಂತ ಪಾಲಿಸಿಕೊಂಡು ಬಂದವನು ಎಂದು ಹೇಳಿದರು. ಮುಖ್ಯಮಂತ್ರಿಯವರಲ್ಲಿ ನಿಮಗೆ ವಿಶ್ವಾಸವಿಲ್ಲವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ನನಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಅವರು ಹಲವರು ಬಾರಿ ಮಾರ್ಗದರ್ಶನ ನೀಡಿದ್ದಾರೆ. ಕೆಲವೊಂದು ವಿಚಾರಗಳಲ್ಲಿ ನಾವು ದೂರವಿದ್ದೇವೆ. ಸರ್ಕಾರದ ಕೆಲಸಗಳು ಕಾನೂನಿನಂತೆ ನಡೆಯಬೇಕೆಂಬುದು ನನ್ನ ಉದ್ದೇಶ ಎಂದರು.

ಪತ್ರ ಬರೆದಿರುವ ಬಗ್ಗೆ ಕೆಲವರು ನಾನು ಒಳ್ಳೆಯ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ಮತ್ತೆ ಕೆಲವು ಶಾಸಕರು ಮುಖ್ಯಮಂತ್ರಿಯವರನ್ನು ಮೆಚ್ಚಿಸುವ ಮಾತುಗಳನ್ನಾಡಿದ್ದಾರೆ. ನನಗೂ ಅದಕ್ಕೂ ಸಂಬಂಧವಿಲ್ಲ. ನಿಯಮಾವಳಿಗಳ ಪ್ರಕಾರ, ಕೆಲಸವಾಗಬೇಕೆಂಬುದು ನನ್ನ ಉದ್ದೇಶ ಅಷ್ಟೇ ಎಂದು ಹೇಳಿದರು. ಬೆಂಗಳೂರು ಜಿಲ್ಲಾ ಪಂಚಾಯಿತಿಗೆ 65 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅನುದಾನವನ್ನು ಪತ್ರ ಬರೆದ ಮೇಲೆ ತಡೆ ಹಿಡಿಯಲಾಗಿದೆ ಎಂದು ತಿಳಿಸಿದರು.

ಬಿಎಸ್‍ವೈ ರಾಜೀನಾಮೆ ನೀಡಬೇಕು, ಇಲ್ಲ ಈಶ್ವರಪ್ಪನವರಿಂದ ರಾಜೀನಾಮೆ ಪಡೆಯಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ನನ್ನ ಮತ್ತು ಯಡಿಯೂರಪ್ಪನವರ ವೈಯಕ್ತಿಕ ವಿಚಾರವಲ್ಲ. ನಿಯಮಾನುಸಾರ ಅನುದಾನ ಬಿಡುಗಡೆ ಮಾಡಲಿ ಎಂಬುದನ್ನಷ್ಟೇ ಹೇಳಿದ್ದೇನೆ ಎಂದರು.
ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಅಶಿಸ್ತು ಎದುರಾಗಿಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಶಿಸ್ತಿನ ಪ್ರಕಾರ ಹೋಗಬೇಕೆಂಬ ಉದ್ದೇಶದಿಂದ ಈ ರೀತಿ ನಡೆದುಕೊಂಡಿದ್ದೇನೆ ಎಂದು ಉತ್ತರಿಸಿದರು.

Facebook Comments