“ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುತ್ತಾರೆ”

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ,ನ.18- ಕಾಂಗ್ರೆಸ್ ಪಕ್ಷವನ್ನು ಪೂರ್ಣ ಮುಗಿಸುವವರೆಗೂ ಸಿದ್ದರಾಮಯ್ಯ ಬಿಡುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಐದಾರು ಸೀಟು ಬರೋಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ಬಿಜೆಪಿ 25 ಸ್ಥಾನಗಳಲ್ಲಿ ಜಯ ಸಾಧಿಸಿತು. ಕಾಂಗ್ರೆಸ್ ಕೇವಲ ಒಂದೇ ಒಂದು ಸ್ಥಾನದಲ್ಲಿ ಗೆದ್ದಿತು ಎಂದರು.

ಬಿಎಸ್‍ವೈ ಸಿಎಂ ಆಗೋಲ್ಲ ಅಂದರು; ಬಿಎಸ್‍ವೈ ಸಿಎಂ ಆದರು. ಮೋದಿ ಪ್ರಧಾನಿ ಆಗೊಲ್ಲ ಎಂದರು; ಅವರು ಪ್ರಧಾನಿಯಾದರು. ಕುಮಾರಸ್ವಾಮಿ ಅವರಪ್ಪರಾಣೆ ಸಿಎಂ ಆಗಲ್ಲ ಎಂದು ಕಡೆಗೇ ತಾವೇ ಅವರಿಗೆ ಸಿಎಂ ಪಟ್ಟ ಕೊಟ್ಟರು. ಹೀಗೆ ಸಿದ್ದರಾಮಯ್ಯ ಏನೇನು ಆಗೋಲ್ಲ ಎಂದಿದ್ದಾರೋ ಅದೆಲ್ಲ ಸುಳ್ಳಾಗಿದೆ ಎಂದರು.

ಈಗಲೂ ಬಿಎಸ್‍ವೈ ಮನೆಗೆ ಹೋಗ್ತಾರೆ ಅಂದಿದ್ದಾರೆ. ಆದರೆ ಬಿಎಸ್‍ವೈ ಮತ್ತೆ ಗದ್ದುಗೆಯಲ್ಲಿ ಮೂರುವರೆ ವರ್ಷ ಪೂರ್ಣಾವಧಿ ಸಿಎಂ ಆಗಿರುತ್ತಾರೆ. ಇದು ಸಿದ್ದರಾಮಯ್ಯನವರಿಗೂ ಗೊತ್ತು. ಆದರೂ ಸಿದ್ದರಾಮಯ್ಯ ತಮ್ಮ ಪಕ್ಷದಲ್ಲಿ ನಾನೇ ನಾಯಕ ಎಂದು ಪ್ರತಿಬಿಂಬ ಮಾಡೋದಕ್ಕೆ ಮೋದಿ, ಬಿಎಸ್‍ವೈ ಬಗ್ಗೆ ಹೇಳಿಕೆ ಕೊಡ್ತಾರೆ ಎಂದು ಗುಡುಗಿದರು.

ರಾಜ್ಯ ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಾಗಿವೆ. ಡಿಕೆಶಿ ಮೈಸೂರಿನ ಮೆರವಣಿಗೆ ವೇಳೆ ಸಿದ್ದರಾಮಯ್ಯ ಎಲ್ಲಿದ್ರು, ನನಗೆ ಗೊತ್ತಿಲ್ಲ ಎಂದ ಅವರು, ಸಿದ್ದರಾಮಯ್ಯ ಲಿಂಗಾಯತ- ವೀರಶೈವ ಧರ್ಮ ಒಡೆದರು. ಒಡೆಯೋದರಲ್ಲಿ ಸಿದ್ದು ನಿಸ್ಸೀಮ ಎಂದು ತಿಳಿಸಿದರು. ಬಿಜೆಪಿ ಬಗ್ಗೆ ಮಾತನಾಡೋಕೆ ಅವರಿಗೆ ಏನೇನು ಅಧಿಕಾರ ಇಲ್ಲ. ಮುಂದಿನ ಎಲೆಕ್ಷನ್ ನಲ್ಲಿ ಕಾರ್ಯಕರ್ತರ ಶ್ರಮದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್, ಜೆಡಿಎಸ್‍ನವರು ಬಿಜೆಪಿಯತ್ತ ಆಕರ್ಷಿತರಾಗಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಬಂದರೆ ತಗೋತಿವಿ, ಎಲ್ಲಿ ಇಡಬೇಕು ಅಲ್ಲಿ ಇಡ್ತೀವಿ ಎಂದರು.

ಪ್ರಾಮಾಣಿಕರಿಗೆ ಬಿಜೆಪಿ ಅನ್ಯಾಯ ಮಾಡೋಲ್ಲ, ಅವರಿಗೆ ಏನು ನ್ಯಾಯ ಕೊಡ್ಬೇಕೋ ಕೊಡ್ತೀವಿ. ಅನರ್ಹ ಶಾಸಕರಿಗೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಅನರ್ಹ ಶಾಸಕರನ್ನು ಸೋಲಿಸೋದೆ ಗುರಿ ಎಂಬ ಎಚ್‍ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಚ್‍ಡಿಕೆ ಮೊದಲ ತಮ್ಮ ಕ್ಷೇತ್ರ ಉಳಿಸಿಕೊಳ್ಳಲಿ. ಅಪ್ಪ-ಮಗನನ್ನೆ ಉಳಿಸಿಕೊಳ್ಳೋಕೆ ಆಗ್ಲಿಲ್ಲ ಇನ್ನು ಬಿಜೆಪಿ ಅಭ್ಯರ್ಥಿ ಸೋಲಿಸೋ ಶಕ್ತಿ ಅವರಿಗಿದೆಯೇ. ಮೊದಲು ತಮ್ಮ ಪಕ್ಷ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದರು.

Facebook Comments