8 ಕ್ಷೇತ್ರ ಗೆಲ್ಲದಿದ್ದರೆ ರಾಜೀನಾಮೆಗೆ ನಾನು ರೆಡಿ, ನೀವು ರೆಡಿನಾ..? : ಸಿದ್ದುಗೆ ಈಶು ಓಪನ್ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ನ,29- ಉಪಚುನಾವಣೆಯಲ್ಲಿ ಬಿಜೆಪಿ ಎಂಟು ಕ್ಷೇತ್ರದಲ್ಲಿ ಗೆಲ್ಲದೆ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸವಾಲು ಹಾಕಿರುವ ಸಚಿವ ಈಶ್ವರಪ್ಪ, ಗೆದ್ದರೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿದ್ದೀರಾ ಎಂದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಎಲ್ಲಾ 15 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಆ ವಿಶ್ವಾಸ ನಮಗಿದೆ ಎಂದರು.

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎನ್ನುವುದು ಹುಚ್ಚುತನದ ಪರಮಾವಧಿ. ಸಿದ್ದರಾಮಯ್ಯ ಓರ್ವ ಹುಚ್ಚ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗುತ್ತೆ ಅಂದ್ರೆ ಅದು ನಗಪಾಟಲು. ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಅವರು ಎಷ್ಟು ಕಷ್ಟ ಅನುಭವಿಸಿದ್ದಾರೆಂದು ಅವರೇ ಹೇಳಿದ್ದಾರೆ. ಈ ಹಿಂದಿನ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣವಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟಲು ಆಗಲ್ಲಾ ಅಂತಿದ್ರು, ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೊಂದು ಸ್ಥಾನ ಪಡೆದುಕೊಂಡವು. ರಾಜ್ಯದ ಜನ ಎರಡೂ ಪಕ್ಷಕ್ಕೆ ಸರಿಯಾಗಿ ಬುದ್ದಿ ಕಲಿಸಿದ್ದಾರೆ ಎಂದರು. ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಬಾದೆಂದು ದೇವೇಗೌಡ್ರು, ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ಬರಬಾರದೆಂದು ದೇವೇಗೌಡ್ರು ಕನಸು ಕಾಣ್ತಾ ಇದ್ದಾರೆ. ಅವರು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು.

ಉಪಚುನಾವಣೆ ಬಗ್ಗೆ ಬಿಜೆಪಿ ಉಸ್ತುವಾರಿಗಳು ಯಾವುದೇ ವರದಿ ಕೊಟ್ಟಿಲ್ಲ. ನಾವು 15 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ಗುರಿ ಇಟ್ಟುಕೊಂಡಿದ್ದೇವೆ. ಉಪ ಚುನಾವಣೆ ನಂತ್ರ ನಾನೇ ಸಿಎಮ್ ಎಂದು ಸಿದ್ದರಾಮಯ್ಯ ಕನಸು ಕಾಣ್ತಾ ಇದ್ದಾರೆ. ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ, ಅವರು ಹಗಲು ಕನಸು ಕಾಣ್ತಾ ಇದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲಾ ಎಂದರು.

ಯಾರನ್ನೂ ಬೆಳೆಯಲು ಬಿಟ್ಟಿಲ್ಲ:
ಸಿದ್ದರಾಮಯ್ಯ ನಾನು ಕುರುಬ ನಾಯಕ ಎಂದು ಹೇಳ್ತಾರೆ, ಯಾವ ಕುರುಬನ್ನ ಬೆಳೆಯಲಿಕ್ಕೆ ಬಿಟ್ಟಿದ್ದಾರೆ…? ಅವರು ಕುರುಬರನ್ನ ಮತ್ತು ದಲಿತರನ್ನ ಬೆಳೆಯಲಿಕ್ಕೆ ಬಿಟ್ಟಿಲ್ಲ.
ಸಿದ್ದರಾಮಯ್ಯ ಸ್ವಾರ್ಥಿ, ತಾನೊಬ್ಬನೇ ಬೆಳೆಯಬೇಕು ಬೇರೆ ಯಾರು ಬೆಳೆಯಬಾರದು, ತಮ್ಮ ಪಕ್ಷ ಬೆಳೆಬಾರದು ಅನ್ನುವವರು ಸಿದ್ದರಾಮಯ್ಯ. ಅವರು ಕಾಂಗ್ರೆಸ್ ಪಕ್ಷವನ್ನು ಛಿದ್ರ ಛಿದ್ರ ಮಾಡಲು ಹೊರಟಿದ್ದಾರೆ ಎಂದು ಹೇಳಿದರು. ಕುಮಾರಸ್ವಾಮಿ ಬಿಜೆಪಿಯನ್ನ ಸೋಲಿಸುವುದೆ ನನ್ನ ಗುರಿ ಎನ್ನುತ್ತಿದ್ದಾರೆ, ಅವರಿಗೆ ತಮ್ಮ ತಂದೆ ಮತ್ತು ಮಗನನ್ನ ಗೆಲ್ಲಿಸಲು ಆಗಿಲ್ಲ ಎಂದು ಕಿಡಿಕಾರಿದರು.

Facebook Comments