ಈಶ್ವರಪ್ಪರನ್ನು ಡಿಸಿಎಂ ಮಾಡುವಂತೆ ಸ್ವಾಮೀಜಿಗಳ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.29-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿವಿಧ ಮಠಗಳ ಸ್ವಾಮೀಜಿಗಳು ಇಂದಿಲ್ಲಿ ಆಗ್ರಹಿಸಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ ಮಖಣಾಪೂರ ಗುರುಪೀಠದ ಸೋಮಲಿಂಗೇಶ್ವರ ಮಹಾಸ್ವಾಮೀಜಿ, ರೇವಣಸಿದ್ದೇಶ್ವರ ಗುರುಪೀಠದ ಶಾಂತಮಯ ರೇವಣಸಿದ್ದೇಶ್ವರ ಮಹಾಸ್ವಾಮೀಜಿ, ಅಥಣಿಯ ಸಿದ್ಧ ಸಿರಿ ಸಿದ್ಧಾಶ್ರಮ ಕೌಲಗುಡ್ಡ ಹಣಮಾಪೂರ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹಾಗೂ ಗಣಿ ಆಶ್ರಮದ ಚಿನ್ಮಯಾನಂದ ಮಹಾಸ್ವಾಮೀಜಿ ಅವರು ಮಾತನಾಡಿ, ಬಿಜೆಪಿಯ ಕೇಂದ್ರ ನಾಯಕರು ಈಶ್ವರಪ್ಪ ಅವರಿಗೆ ಸಂಪುಟ ರಚನೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ರಾಜ್ಯ ಸರ್ಕಾರ ರಚನೆಗೆ ಹಲವರು ಕಾರಣರಾಗಿದ್ದಾರೆ. ಅದು ನಿಜ. ಆದರೆ, ಈಶ್ವರಪ್ಪ ಅವರನ್ನು ಕಡೆಗಣಿಸದೆ ಸೂಕ್ತ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಈಶ್ವರಪ್ಪ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಕೇಳಿ ಪಡೆಯಬಾರದು. ಬಿಜೆಪಿಗಾಗಿ ಈಶ್ವರಪ್ಪ ಅವರು ಇದುವರೆಗೂ ದುಡಿದಿದ್ದಾರೆ. ಅದರ ಫಲವಾಗಿ ಈ ಸ್ಥಾನ ದೊರೆಯಬೇಕು ಎಂದರು. ನಾವೆಲ್ಲರೂ ಉತ್ತರ ಕರ್ನಾಟಕದ ಸ್ವಾಮೀಜಿಗಳು, ಎಲ್ಲರೂ ಒಟ್ಟಾಗಿ ಬಂದು ಕೆ.ಎಸ್.ಈಶ್ವರಪ್ಪ ಅವರಿಗೆ ಸೂಕ್ತಸ್ಥಾನಮಾನ ಕೊಡಿ ಎಂದು ಕೇಳುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈಶ್ವರಪ್ಪ ಅವರೂ ಪಕ್ಷ ಕಟ್ಟಿದ್ದಾರೆ. ಅವರಿಗೆ ಅನ್ಯಾಯವಾಗಬಾರದು.

ಈಶ್ವರಪ್ಪ ಅವರು ಹಿಂದುತ್ವ ಹಾಗೂ ಪಕ್ಷದ ಬಗ್ಗೆ ನಿಷ್ಟೆಹೊಂದಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನದ ಗೊಂದಲ ಬಗೆಹರಿದಿದೆ. ಬಿಜೆಪಿಗೆ ವಲಸೆ ಬಂದಿರುವ ಎಲ್ಲರನ್ನೂ ಪರಿಗಣಿಸಬೇಕು. ಯಾರನ್ನೂ ಕಡೆಗಣಿಸಬಾರದು. ಇದನ್ನು ವರಿಷ್ಠರು ನಡೆಸಿಕೊಡಬೇಕು. ಒಂದು ವೇಳೆ ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ದೊರೆಯದಿದ್ದರೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಬೀದರ್‍ನಿಂದ ಚಾಮರಾಜನಗರದವರೆಗೂ ಈಶ್ವರಪ್ಪ ಅವರ ಬೆಂಬಲಿಗರಿದ್ದಾರೆ. ಈಶ್ವರಪ್ಪ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಆಗಲಿಲ್ಲ. ಹೀಗಾಗಿ ಕನಿಷ್ಠ ಪಕ್ಷ ಡಿಸಿಎಂ ಸ್ಥಾನವನ್ನಾದರೂ ಕೊಡಬೇಕು. ಒಬ್ಬರಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೆ ಈಶ್ವರಪ್ಪ ಅವರನ್ನು ಒಂದು ಬಾರಿಯಾದರೂ ಸಿಎಂ ಮಾಡಬೇಕು. ಇವರು ಎಂದೂ ಪಕ್ಷ ಬಿಟ್ಟು ಹೋದವರಲ್ಲ. ಇದನ್ನು ಕೇಂದ್ರದ ನಾಯಕರು ಗಮನಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸುಕ್ಷೇತ್ರ ಹುಲಜಂತಿ ಮಾಳಿಂಗರಾಯ ಮಹಾರಾಜರು, ತುಮಕೂರಿನ ಬಿಂದುಶೇಖರ ಸ್ವಾಮೀಜಿ, ನಾಗರಾಳ ಅಮೋಘಸಿದ್ದೇಶ್ವರ ಆಶ್ರಮ ಲಕ್ಕಪ ಮಹಾರಾಜರು, ಸುಜ್ಞಾನ ಕುಟೀರ ಕೋಳಿಗುಡ್ಡ ಸ್ವರೂಪಾನಂದ ಮಹಾಸ್ವಾಮೀಜಿ, ಲಕ್ಕನಾಯಕನ ಕೊಪ್ಪ ಕೃಷ್ಣಾನಂದ ಮಹಾಸ್ವಾಮೀಜಿ, ಬಸವನ ಬಾಗೇವಾಡಿಯ ಮುತ್ತೇಶ್ವರ ಸ್ವಾಮೀಜಿ, ಢವಳಾವರದ ಸಿದ್ದಲಿಂಗ ಒಡೇಯರ, ಅರಕೆರೆಯ ಅಪ್ಪು ಒಡೇಯರ, ಆಲಬಾಳದ ಅಮಸಿದ್ದ ಒಡೇಯರ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹಾಜರಿದ್ದರು.

Facebook Comments