ಮನೆ ಮನೆ ಗಂಗೆ ಯೋಜನೆಯಡಿ 64,84,227 ಮನೆಗಳಿಗೆ ನಲ್ಲಿ ಮೂಲಕ್ ಕುಡಿಯುವ ನೀರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.24- ಮನೆ ಮನೆ ಗಂಗೆ ಯೋಜನೆಯಡಿ 64,84,227 ಮನೆಗಳಿಗೆ 2024 ಒಳಗೆ ಕೊಳಾಯಿ(ನಲ್ಲಿ) ಮೂಲಕ ಕುಡಿಯುವ ನೀರು ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 80,72,422 ಮನೆಗಳಿದ್ದು, ಈಗಾಗಲೇ 15,88,195 ಮನೆಗಳಿಗೆ ಕೊಳಾಯಿ ಸಂಪರ್ಕ ಒದಗಿಸಲಾಗಿದೆ ಎಂದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ 5612 ಕಿಲೋಮೀಟರ್ ರಸ್ತೆ ಹಂಚಿಕೆ ಮಾಡಿದ್ದು, ಇದರಲ್ಲಿ ಮೊದಲ ಹಂತದಲ್ಲಿ 3226 ಕಿಲೋಮೀಟರ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇಂದ್ರದ ಪಾಲು 1274 ಕೋಟಿ ರೂ. ಮತ್ತು ರಾಜ್ಯದ ಪಾಲು 1455 ಕೋಟಿ ರೂ. ಸೇರಿ 2729 ಕೋಟಿ ರೂ. ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿದೆ. ಯೋಜನೆ ಅನುಷ್ಟಾನಕ್ಕೆ 1100 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಈ ಯೋಜನೆ ಪ್ರಾರಂಭಕ್ಕೆ ಟೆಂಡರ್ ಕರೆಯಲು ಅನುಮೋದನೆ ಸಿಕ್ಕಿದೆ ಎಂದ ಅವರು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಉದ್ಯೋಗ ಖಾತ್ರಿ ಯೋಜನೆ ಅಡಿ ದಿನ ಗೂಲಿ 275 ರೂ.ಗೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಲಿಗಾಗಿ 1039 ಕೋಟಿ ರೂ. ಮತ್ತು ಸಾಮಗ್ರಿಗಾಗಿ 821 ಕೋಟಿ ರೂ. ಸೇರಿ ಒಟ್ಟು 1861 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದರು. ಕಳೆದ 2019-20ರ ಕೂಲಿ ಬಾಕಿ 346 ಕೋಟಿ ರೂ. ಕಾರ್ಮಿಕರ ಖಾತೆಗೆ ಪಾವತಿ ಮಾಡಲಾಗಿದೆ.

ಏಪ್ರಿಲ್‍ನಲ್ಲಿ 1.76 ಲಕ್ಷ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. ಇನ್ನು ಕೂಡಾ ಹೆಚ್ಚು ಕಾರ್ಮಿಕರು ಕೆಲಸ ಮಾಡಬೇಕು. ಕೂಲಿ ಮಾಡಿದ 15 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಕೂಲಿ ಹಣ ಹಾಕಲಾಗುತ್ತೆ ಎಂದು ಮಾಹಿತಿ ನೀಡಿದರು.ಕೊರೊನಾ ವೇಳೆ ನರೇಗಾ ಅಡಿ ಕೆಲಸ ಮಾಡೋರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಬೂನಿನಿಂದ ಆಗಾಗ ಕೈ ತೊಳೆಯಬೇಕು. ಬಿಸಿ ನೀರು ಸೇವನೆ ಮಾಡಬೇಕು. ಜ್ವರ, ಕೆಮ್ಮು ನೆಗಡಿ ಬಂದ್ರೆ ಶೀಘ್ರವೇ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದರು.

ಬರ ಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ 49 ಬರ ಪೀಡಿತ ತಾಲೂಕುಗಳಿಗೆ 1 ಕೋಟಿ ರೂಬಿಡುಗಡೆ ಮಾಡಲಾಗಿದೆ. ಬರವಲ್ಲದ 127 ತಾಲೂಕಿಗೆ ತಲಾ 50 ಲಕ್ಷ ಬಿಡುಗಡೆ ಮಾಡಲಾಗಿದೆ. ಬರ ಪೀಡಿತವಲ್ಲದ ತಾಲೂಕುಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲು 50 ಕೋಟಿ ರೂಗಳಿಗೆ ಕಂದಾಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ 29.50 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin