ಖಾಸಗಿ ಸಂಸ್ಥೆಗಳಿಂದ ಕುಡಿಯುವ ನೀರು ಘಟಕ ಸ್ಥಾಪನೆ: ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18- ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದರು.  ಅಬ್ದುಲ್ ನಜೀಬ್ ಸಾಬ್ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಉಪಗ್ರಹ ಕೇಂದ್ರ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಶುದ್ದ ಕುಡಿಯುವ ನೀರಿನ ಘಟಕಕ್ಕೆ ಅಗತ್ಯ ಭೂಮಿ,ನೀರು, ವಿದ್ಯುತ್ ಕೊಟ್ಟರೆ ಸಾಕು ಯಾವುದೇ ಆರ್ಥಿಕ ನೆರವು ನೀಡಬೇಕಿಲ್ಲ.

ಖಾಸಗಿ ಸಂಸ್ಥೆಗಳು ಶುದ್ದೀಕರಿಸಿದ ನೀರನ್ನು ಸಾರ್ವ ಜನಿಕರಿಗೆ ನೀಡಲಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲೇ ನೀರನ್ನು ನೀಡಲಾಗುತ್ತದೆ ಎಂದರು. ರಾಜ್ಯದಲ್ಲಿ 18 ಸಾವಿರ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಬಹಳಷ್ಟು ಹಾಳಾಗಿವೆ. ಗ್ರಾಮಪಂಚಾಯ್ತಿಗಳಲ್ಲಿ ಹೊಸದಾಗಿ ಫಲಕ ಪ್ರದರ್ಶಿಸಿ ಎಷ್ಟು ಶುದ್ದ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಅರಿತು ಕಾರ್ಯ ಸ್ಥಗಿತಗೊಳಿಸಿರುವ ಘಟಕಗಳನ್ನು ದುರಸ್ತಿಗೊಳಿಸಲು ಸೂಚಿಸಲು ತಿಳಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ 6021 ಗ್ರಾಮಪಂಚಾಯ್ತಿಗಳನ್ನು ಘನತ್ಯಾಜ್ಯ ನಿರ್ವಹಣೆ ಮಾಡಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಪ್ರತಿ ಗ್ರಾಮಪಂಚಾಯ್ತಿಗೆ 20 ಲಕ್ಷ ರೂ. ನೀಡಿದ್ದು, ಆರಂಭಿಕವಾಗಿ 10 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಪೂರಕವಾಗಿ ಘನತ್ಯಾಜ್ಯ ನಿರ್ವಹಣೆಯನ್ನು ಕೈಗೊಳ್ಳಲಾಗುತ್ತಿದೆ.

ಜ.31ರಂದು ಈ ಸಂಬಂಧ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲಾಗುವುದು ಎಂದರು. ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅತೀಕ್ ಮಾತನಾಡಿ, ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗಾಗಿ 100 ಘಟಕಗಳಿಗೆ ಒಂದು ಪ್ಯಾಕೇಜ್‍ನಂತೆ ಟೆಂಡರ್ ಕರೆಯಲು ಅಧಿಕಾರ ನೀಡಲಾಗಿತ್ತು. ಈಗ ಸುಮಾರು ಆರು ಸಾವಿರ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಪ್ರಾರಂಭವಾಗಿದ್ದು, 20 ಲೀಟರ್ ನೀರಿಗೆ 5 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಎಸ್‍ಎಆರ್‍ಡಿ ನಿರ್ದೇಶಕರಾದ ಶಿಲ್ಪನಾಗ್ ಮಾತನಾಡಿ, ಬಾಹ್ಯಾಕಾಶ ಇಲಾಖೆ ಹಾಗೂ ಇಸ್ರೋ ಸಂಸ್ಥೆಯ ತಾಂತ್ರಿಕ ನೆರವಿನಿಂದ 427 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ಯಾಟ್‍ಕಾಮ್ ಕೇಂದ್ರವು ಭೂ ಕೇಂದ್ರ ಹಾಗೂ ವಿಸ್ತರಿಸಲ್ಪಟ್ಟ ಜಿಸ್ಯಾಟ್ 12ಸಿ ಪರಿವರ್ತಕವನ್ನು ಹೊಂದಿದೆ.

ಏಕಮುಖ ದೃಶ್ಯ ಮಾಧ್ಯಮ ಮತ್ತು ದ್ವಿಮುಖ ಶ್ರವಣ ಮಾಧ್ಯಮ ಸಂಪರ್ಕ ಇರುವ ಸ್ಟುಡಿಯೋವನ್ನು ಒಳಗೊಂಡಿದೆ ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯ್ತಿಯಲ್ಲಿ ಸ್ವೀಕೃತಿ ಕೇಂದ್ರಗಳನ್ನು ತೆರೆಯಲಾಗಿದ್ದು, ತರಬೇತಿ ನೀಡಲು ಅನುಕೂಲವಾಗಿದೆ ಎಂದು ಹೇಳಿದರು. ಪಂಚಾಯತ್‍ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಗ್ರಾಮೀ ಣಾಭಿವೃದ್ಧಿ ಇಲಾಖೆ ನಿರ್ದೇಶಕರಾದ ಜುಲ್ಪಿಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments