KSFCಗೆ 2020-21ನೆ ಸಾಲಿನಲ್ಲಿ 42.90 ಕೋಟಿ ನಿವ್ವಳ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.5- ರಾಜ್ಯದ ಕೈಗಾರಿಕೋದ್ಯಮಿಗಳಿಗೆ 62 ವರ್ಷಗಳ ಸುದೀರ್ಘ ಹಣಕಾಸು ಸೇವೆ ಕಲ್ಪಿಸಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2020-2021ನೆ ಸಾಲಿನಲ್ಲಿ 42.90 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಏಕರೂಪ್‍ಕೌರ್ ತಿಳಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಸ್ಥೆಯ ಷೇರುದಾರರೊಂದಿಗೆ ನಡೆದ 62ನೆ ವಾರ್ಷಿಕ ಮಹಾಸಭೆ ಯಲ್ಲಿ ಈ ವಿಷಯ ಹೇಳಿದರು.

ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಚೇತರಿಕೆ ಅಂತರ್ಗತ ಮತ್ತು ಸುಸ್ಥಿರವಾಗಿಸಲು ಹಣಕಾಸು ಸೇರ್ಪಡೆ ನೀತಿಯು ಆದ್ಯತೆಯಾಗಿ ಪರಿಗಣಿಸಿ 2021-2022ನೆ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 700 ಕೋಟಿ ರೂ.ಗಳ ಮಂಜೂರಾತಿ ಗುರಿಯನ್ನು ಹೊಂದಿರುವುದಾಗಿ ವಿವರಿಸಿದರು. 2020-21ರ ಕೋವಿಡ್ ಸಾಂಕ್ರಾಮಿಕ ರೋಗವು ದೇಶದ ಆರ್ಥಿಕ ಮತ್ತು ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿತ್ತು.

ಇದನ್ನು ನಿಗ್ರಹಿಸಲು ಆರ್ಥಿಕತೆ ಸುಸ್ಥಿರವಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, 2020-21ರಲ್ಲಿ ರಾಜ್ಯಸರ್ಕಾರದ ಬೆಂಬಲದೊಂದಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ನವೀಕೃತ ಶೇ.6ರ ಬಡ್ಡಿ ಸಹಾಯ ಧನ ಯೋಜನೆ ರೂಪಿಸಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಇದರಿಂದ ಹೆಚ್ಚಿನ ಮಂಜೂರಾತಿ ಹಾಗೂ ವಿತರಣೆ ಗುರಿ ಸಾಧಿಸಲು ಅನುಕೂಲವಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯು 2020-21ರ ಆರ್ಥಿಕ ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 401.66 ಕೋಟಿ ರೂ.ಗಳ ಸಾಲದ ಮಂಜೂರಾತಿ ಮಾಡಿದ್ದು, ಇದರಲ್ಲಿ 375.77 ಕೋಟಿ ಮೊತ್ತದ ಮಂಜೂರಾತಿಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ಒಳಗೊಂಡಿದೆ. ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಯಲ್ಲಿಯೂ ಸಂಸ್ಥೆಯು ಹಿಂದಿನ ವರ್ಷಕ್ಕಿಂತ ಪ್ರಸಕ್ತ ವರ್ಷದಲ್ಲಿ 18.45 ಕೋಟಿ ರೂ.ಗಳ ಹೆಚ್ಚಿನ ಬಡ್ಡಿ ವಸೂಲಾತಿ ಮಾಡಲಾಗಿದೆ.

ಸಂಸ್ಥೆಯು ಸ್ಥಾಪಿತ ದಿನದಿಂದ ಇಲ್ಲಿಯವರೆಗೆ ಎಸ್‍ಸಿ-ಎಸ್‍ಟಿಯ 21,892 ಉದ್ಯಮಿಗಳಿಗೆ 2,266.13 ಕೋಟಿ ರೂ.ಗಳಿಗೂ ಅಧಿಕ ಸಾಲ ಮಂಜೂರಾತಿ ನೆರವು ನೀಡಿದ್ದು, ಸಂಸ್ಥೆಯು ಆರಂಭದಿಂದ ಇಲ್ಲಿಯವರೆಗೆ 31,069ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ 4368.47 ಕೋಟಿ ರೂ. ಸಾಲ ಮಂಜೂರು ಮಾಡಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತ 41,157 ಉದ್ಯಮಿಗಳಿಗೂ ಇಲ್ಲಿಯವರೆಗೆ 1790 ಕೋಟಿ ರೂ. ಸಾಲ ಒದಗಿಸಿದೆ.

ರಾಜ್ಯ ಹಣಕಾಸು ಸಂಸ್ಥೆಗೆ ಸರ್ಕಾರದ ನೆರವು: 2020-21ರ ಹಣಕಾಸು ವರ್ಷದಲ್ಲಿ ಸರ್ಕಾರವು ಸಂಸ್ಥೆಗೆ 100 ಕೋಟಿ ರೂ. ಈಕ್ವಿಟಿ ಬಂಡವಾಳವನ್ನು ಹಾಗೂ 172.25 ಕೋಟಿ ರೂ.ಗಳ ಬಡ್ಡಿ ಸಹಾಯಧನದ ನೆರವನ್ನು ಸಂಸ್ಥೆಯ ವಿವಿಧ ಯೋಜನೆಗಳಡಿ ಒದಗಿಸಿದೆ. ಎಸ್‍ಸಿ-ಎಸ್‍ಟಿ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸಿನ ಯೋಜನೆಯಡಿ ಕರ್ನಾಟಕ ಸರ್ಕಾರವು 20.56 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಸಂಸ್ಥೆಯಿಂದ ಕೋವಿಡ್-19ರ ಸಾಂಕ್ರಾಮಿಕ ಸೋಂಕು ಅವಧಿಯಲ್ಲಿ ಸಾಲಗಾರರಿಗೆ ಏಪ್ರಿಲ್ 2020 ರಿಂದ ಆಗಸ್ಟ್ 2020ರ ನಡುವಿನ ಅವಧಿಯಲ್ಲಿ ಪಾವತಿಸಬೇಕಿದ್ದ ಅಸಲು ಕಂತುಗಳನ್ನು ಮುಂದೂಡಲಾಯಿತು ಹಾಗೂ ಪಾವತಿಸಬೇಕಾದ ಬಡ್ಡಿ ಮತ್ತು ಅಸಲು ಕಂತಿನೊಂದಿಗೆ ಬಾಕಿ ಪಾವತಿಸಲು 10.9.2020ರ ವರೆಗೆ ಅವಕಾಶ ನೀಡಲಾಗಿತ್ತು ಎಂದು ವಿವರ ನೀಡಿದರು.

Facebook Comments