ಆರ್ಥಿಕ ಸಂಕಷ್ಟ : ವಿಭಾಗಗಳ ವಿಲೀನಕ್ಕೆ ಮುಂದಾದ ಕೆಎಸ್‌ಆರ್‌ಟಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.23-ಕೋವಿಡ್-19ರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ವೆಚ್ಚ ತಗ್ಗಿಸುವ ಉದ್ದೇಶದಿಂದ ಎರಡು ವಿಭಾಗಗಳನ್ನು ವಿಲೀನಗೊಳಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಕಳೆದ ಆರೇಳು ತಿಂಗಳಿನಿಂದ ಆದಾಯ ಗಣನೀಯವಾಗಿ ಇಳಿಮುಖವಾಗಿರುವುದರಿಂದ ಮೈಸೂರು ಗ್ರಾಮಾಂತರ ಹಾಗೂ ಮೈಸೂರು ನಗರ ವಿಭಾಗಗಳನ್ನು ವಿಲೀನಗೊಳಿಸಲು ಕೆಎಸ್‌ಆರ್‌ಟಿಸಿ ಉದ್ದೇಶಿಸಿದೆ.

ಕೆಎಸ್‌ಆರ್‌ಟಿಸಿ ಆದಾಯ ಕಡಿಮೆಯಾಗಿರುವುದರಿಂದ ವೆಚ್ಚ ತಗ್ಗಿಸಿ ಆರ್ಥಿಕ ಪರಿಸ್ಥಿತಿ ಸದೃಢಗೊಳಿಸುವ ಉದ್ದೇಶದಿಂದ ಈ ಎರಡೂ ವಿಭಾಗಗಳನ್ನು ವಿಲೀನಗೊಳಿಸಲು ಉದ್ದೇಶಿಸಿದೆ. ಎರಡೂ ವಿಭಾಗಗಳನ್ನು ವಿಲೀನಗೊಳಿಸುವ ಸೂಕ್ತತೆ, ಸಾಧಕ-ಬಾಧಕಗಳ ಪರಿಶೀಲಿಸಲು ಹಾಗೂ ಮೈಸೂರು ನಗರ ಸಾರಿಗೆ ವಿಭಾಗವನ್ನು ಆರ್ಥಿಕವಾಗಿ ಸದೃಢಗೊಳಿಸುವ ಕುರಿತಂತೆ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲು ಆರು ಮಂದಿ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ಕೆಎಸ್‌ಆರ್‌ಟಿಸಿಯ ನಿರ್ದೇಶಕರ (ಭದ್ರತಾ ಮತ್ತು ಜಾಗೃತ) ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.  ಮೈಸೂರು ಗ್ರಾಮಾಂತರ ವಿಭಾಗದ ಮುಖ್ಯ ಕಾಮಗಾರಿ ಅಭಿಯಂತರರು ಹಾಗೂ ಉಸ್ತುವಾರಿ ಅಧಿಕಾರಿ, ಮೈಸೂರು ನಗರ ಸಾರಿಗೆ ವಿಭಾಗದ ಮುಖ್ಯ ಯಾಂತ್ರಿಕ ಅಭಿಯಂತರರು(ನಿ) ಮತ್ತು ಉಸ್ತುವಾರಿ ಅಧಿಕಾರಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (ಸಿಬ್ಬಂದಿ), ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ಸಮಿತಿಯ ಸದಸ್ಯರಾಗಿದ್ದಾರೆ. ಮುಖ್ಯ ಸಂಚಾರ ವ್ಯವಸ್ಥಾಪಕರನ್ನು(ಕಾ) ಸಮಿತಿಯ ಸದಸ್ಯರು ಹಾಗೂ ಸಂಚಾಲಕರಾಗಿ ನೇಮಿಸಿ ಕೆಎಸ್‌ಆರ್‌ಟಿಸಿ ಆದೇಶಿಸಿದೆ.

Facebook Comments