ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣದ ದರವನ್ನು ಶೇ.18ರಷ್ಟು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ದರ ಪರಿಷ್ಕರಣೆಗೆ ಅನುಗುಣವಾಗಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಸಲಹೆ ಮಾಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಒಪ್ಪಿದ್ದಾರೆ. ಆದರೆ, ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದರು.

ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆಯ ಕಡತ ಮುಖ್ಯಮಂತ್ರಿಯವರ ಮುಂದಿದೆ. ಕಳೆದ 2013-14ರಲ್ಲಿ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿತ್ತು. ಅಂದಿನಿಂದ ಮತ್ತೆ ಹೆಚ್ಚಳ ಮಾಡಿಲ್ಲ. ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ. ಹೀಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಡೀಸೆಲ್, ಪೆಟ್ರೋಲ್ ದರ ಹೆಚ್ಚಳಕ್ಕೆ ಅನುಗುಣವಾಗಿ ಪ್ರಯಾಣ ದರವನ್ನು ಕೂಡ ಪರಿಷ್ಕರಣೆ ಮಾಡುವಂತೆ ಸಲಹೆ ಮಾಡಲಾಗಿದೆ ಎಂದು ಹೇಳಿದರು.

ಮೂರು ಸಾವಿರ ಬಸ್ ಖರೀದಿ:  ಸಾರಿಗೆ ಸಂಸ್ಥೆಗಳಿಗೆ ಐಷಾರಾಮಿ ಸೇರಿದಂತೆ ಮೂರು ಸಾವಿರ ಹೊಸ ಬಸ್ ಖರೀದಿ ಮಾಡಲಾಗುವುದು. 24 ಸ್ಲೀಪರ್‍ಕೋಚ್ ಬಸ್‍ಗಳನ್ನು ಖರೀದಿ ಮಾಡಲಾಗುತ್ತದೆ ಎಂದರು. 8 ಲಕ್ಷ ಕಿ.ಮೀ. ಕ್ರಮಿಸಿದ ಬಸ್‍ಗಳನ್ನು ಕ್ರಾಮ್‍ಗೆ ಹಾಕಲಾಗುತ್ತಿದ್ದು, ನಮ್ಮ ಬಸ್‍ಗಳ ಚಾರ್ಸಿ 20 ಲಕ್ಷ ಕಿ.ಮೀ. ಬಾಳಿಕೆ ಬರುತ್ತವೆ.

ಈಗಾಗಿ 7 ಲಕ್ಷ ಕಿ.ಮೀ. ಕ್ರಮಿಸಿದ ಬಸ್‍ಗಳನ್ನು ಹರಾಜು ಮಾಡದೆ ಮರು ಕವಚ ನಿರ್ಮಾಣ ಮಾಡಿ ಮತ್ತೆ 6-7 ಲಕ್ಷ ಕಿ.ಮೀ. ಬಳಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಕಾವೇರಿ ನದಿ ನೀರು ಹೋರಾಟಗಾರರ ಮೇಲೆ ಹೂಡಲಾಗಿದ್ದ ಶೇ.90ರಷ್ಟು ಕೇಸುಗಳನ್ನು ಹಿಂಪಡೆಯಲಾಗುತ್ತಿದೆ. ಆದರೆ, ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟು ಮಾಡಿದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

# ವರಿಷ್ಠರ ತೀರ್ಮಾನ ಅಂತಿಮ:
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆಗೆ ಸಂಬಂಧಿಸಿದಂತೆ ವರಿಷ್ಠರು ಕೊಡುವ ತೀರ್ಮಾನವೇ ಅಂತಿಮ ಎಂದ ಸಚಿವರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರಾದ ಎಚ್.ವಿಶ್ವನಾಥ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದೇವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅವಶ್ಯ ಎಂದರು. ಅಟಲ್‍ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 23 ಪಕ್ಷಗಳ ನಿರ್ವಹಣೆ ಮಾಡಿದ್ದರು. ಅದೇ ರೀತಿ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.

Facebook Comments

Sri Raghav

Admin