ಅವ್ಯವಸ್ಥೆ, ಗೊಂದಲ, ನಿಯಮ ಉಲ್ಲಂಘನೆ ಜೊತೆಗೆ ಸಾರಿಗೆ ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 19- ಸರಿಸುಮಾರು ಎರಡು ತಿಂಗಳ ನಂತರ ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ರಾಜ್ಯಾದ್ಯಂತ ವಾಹನಗಳ ಸಂಚಾರ ಇಂದಿನಿಂದ ಆರಂಭವಾಗಿದ್ದು, ಸಣ್ಣಪುಟ್ಟ ಗೊಂದಲಗಳ ನಡುವೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಂಟೋನ್ಮೆಂಟ್ ಮತ್ತು ಕೆಂಪು ವಲಯ ಹೊರತುಪಡಿಸಿ ಇಂದಿನಿಂದ ಕೆಎಸ್‍ಆರ್‍ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆಗಳು ಹಾಗೂ ಬಿಎಂಟಿಸಿ ಬಸ್‍ಗಳ ಸಂಚಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಯಿತು.

ಸೀಮಿತ ಸಂಖ್ಯೆಯ ಬಸ್‍ಗಳ ಸಂಚಾರ ಆರಂಭವಾಗಿದ್ದರಿಂದ ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುವ ತವಕದಲ್ಲಿದ್ದ ಪ್ರಯಾಣಿಕರು ಆರಂಭದಲ್ಲಿ ಗೊಂದಲಕ್ಕೆ ಒಳಗಾದರು.  ಸಂಜೆ 7 ಗಂಟೆಯೊಳಗೆ ವಾಹನಗಳು ನಿಗದಿತ ಸ್ಥಳಕ್ಕೆ ತಲುಪಬೇಕೆಂದು ಸೂಚನೆ ನೀಡಿದ್ದರಿಂದ ದೂರದ ಸ್ಥಳಗಳಿಗೆ ತೆರಳಬೇಕಿದ್ದ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಬಸ್‍ಗಳು ನಿಲ್ದಾಣಕ್ಕೆ ಬರುತ್ತಿದ್ದಂತೆ ಮುಗಿಬಿದ್ದು ಹತ್ತಲು ಮುಂದಾದರು. ಇದರಿಂದ ನಿಯಮಗಳ ಉಲ್ಲಂಘನೆಯಾಯಿತು.

ಬಸ್‍ಗಳಲ್ಲಿ 30 ಜನರಿಗೆ ಪ್ರಯಾಣಿಸಲು ಅವಕಾಶವಿತ್ತು. ಸಾಮಾಜಿಕ ಅಂತರ, ಮಾಸ್ಕ್‍ಗಳ ಕಡ್ಡಾಯ ಬಳಕೆ, ಸಾನಿಟೈಸರ್, ಥರ್ಮಲ್ ಪರೀಕ್ಷೆಗೆ ಒಳಪಡುವುದು ಸೇರಿದಂತೆ ಕೆಲವು ನಿಯಮಗಳನ್ನು ಪ್ರಯಾಣಿಕರು ಪಾಲನೆ ಮಾಡಲಿಲ್ಲ.

ಬಸ್ ಸಿಗುತ್ತೋ ಇಲ್ಲ ಎಂಬ ತವಕದಲ್ಲಿದ್ದ ಜನರು ನಿಲ್ದಾಣಕ್ಕೆ ಬಸ್‍ಗಳು ಆಗಮಿಸುತ್ತಿದ್ದಂತೆ ಸೀಟ್‍ಗಳನ್ನು ಹಿಡಿದುಕೊಳ್ಳುವ ಭರದಲ್ಲಿ ಮುಗಿಬೀಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಈ ನಡುವೆ ಸಾರಿಗೆ ಇಲಾಖೆ ಮಾಡಿದ ಎಡವಟ್ಟು ಕೂಡ ಇನ್ನಷ್ಟು ಗೊಂದಲಕ್ಕೆ ಸಿಲುಕುವಂತೆ ಮಾಡಿತು.

ಶಿವಮೊಗ್ಗ, ದಾವಣಗೆರೆ, ಮೈಸೂರು, ಮಂಗಳೂರು, ಹಾಸನ ಜಿಲ್ಲೆಗಳಿಗೆ ತೆರಳುವವರು ಮಧ್ಯಾಹ್ನ 12 ಗಂಟೆ ನಂತರ ತೆರಳಬೇಕೆಂದು ಸೂಚನೆ ಕೊಟ್ಟಿದ್ದು ಪ್ರಮಾದಕ್ಕೆ ಕಾರಣವಾಯಿತು.

ರಾಜಧಾನಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಧಾರವಾಡ, ಹುಬ್ಬಳ್ಳಿ , ಬೆಳಗಾವಿ, ಬಳ್ಳಾರಿ, ರಾಯಚೂರು, ಕಲಬುರಗಿ, ಬೀದರ್ ಸೇರಿದಂತೆ ಬಹುತೇಕ ಕಡೆ ವಾಹನ ಸಂಚಾರ ಆರಂಭವಾಗಿದೆ.

# ನಿಯಮಗಳ ಉಲ್ಲಂಘನೆ:
ಬಹುತೇಕ ಕಡೆ ಪ್ರಯಾಣಿಕರು ನಿಯಮಗಳನ್ನು ಉಲ್ಲಂಘನೆ ಮಾಡಿದ ದೃಶ್ಯಗಳು ಸರ್ವೇಸಾಮಾನ್ಯವಾಗಿತ್ತು. ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ವತಿಯಿಂದ ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.

ಆದರೆ ಬಹುತೇಕ ಕಡೆ ಸಿಬ್ಬಂದಿ ಬಳಿ ಸ್ಯಾನಿಟೈಸರ್, ಥರ್ಮಲ್ ಪರೀಕ್ಷೆಯ ಉಪಕರಣ ಇರಲೇ ಇಲ್ಲ. ಪ್ರಯಾಣಿಕರಿಗೆ ಸ್ವಯಂ ಪ್ರೇರಿತರಾಗಿ ಮಾಸ್ಕ್‍ಗಳನ್ನು ಧರಿಸಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸರ್ಕಾರ ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಎಲ್ಲೆಡೆ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ತರಾತುರಿಯಲ್ಲಿ ಬಸ್ ಹತ್ತುತ್ತಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.

ಬೆಂಗಳೂರಿನ ಮೆಜೆಸ್ಟಿಕ್‍ನಲ್ಲಿ ಬೆಳಗ್ಗೆ 7 ಗಂಟೆಗೆ ಶಿವಮೊಗ್ಗಕ್ಕೆ ಹೊರಟ ಮೊದಲ ಬಸ್‍ಗೆ ಕುಂಬಳಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಯಾಣಿಕ್ಕೆ ಅನುವು ಮಾಡಿಕೊಡಲಾಯಿತು. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಬಸ್ ಪ್ರಾರಂಭದಲ್ಲೇ ಕೈ ಕೊಟ್ಟಿತು. ಬಳಿಕ ಪ್ರಯಾಣಿಕರೇ ಅದನ್ನು ತಳ್ಳುವ ಮೂಲಕ ಚಾಲನೆಗೆ ವೇಗ ಕೊಟ್ಟರು.

ಹಾಸನದಲ್ಲಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ ಬಸ್ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಟೈರ್‍ಗಳು ಪಂಕ್ಚರ್ ಆಗಿ ಕೈಕೊಟ್ಟವು. ಇದರಿಂದ ಪ್ರಯಾಣಿಕರು ಹಿಡಿಶಾಪ ಹಾಕಿದರು. ತಂದೆ ನಿಧನರಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಶಿರಗುಪ್ಪಕ್ಕೆ ತೆರಳಬೇಕಾಗಿದ್ದ ಮಹಿಳೆಯೊಬ್ಬರು ಸರಿಯಾದ ಮಾಹಿತಿ ಸಿಗದೆ ಬಸ್ ಸಿಗದೆ ಇದ್ದುದರಿಂದ ಬಸ್ ನಿಲ್ದಾಣದಲ್ಲೇ ಕಣ್ಣೀರು ಹಾಕಿದರು.

ಹೀಗೆ ಬಹುತೇಕ ಕಡೆ ಪ್ರಾರಂಭದಲ್ಲಿ ಬಸ್ ಸಂಚಾರಕ್ಕೆ ಗೊಂದಲದ ಗೂಡಾಗಿತ್ತು.ಆದರೂ ಮನೆ ಸೇರುವ ತವಕದಲ್ಲಿದ್ದ ಪ್ರಯಾಣಿಕರು ಆತಂಕದ ನಡುವೆಯೇ ಮನೆ ಸೇರಿದ್ದಾರೆ.  ಸರ್ಕಾರಿ ವಾಹನಗಳ ಜೊತೆ ಖಾಸಗಿ ಬಸ್‍ಗಳು ಸಹ ರಸ್ತೆಗಿಳಿದಿವೆ.

ಕೆಲವು ಕಡೆ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿರುವ ಆರೋಪಗಳು ಕೇಳಿಬಂದಿವೆ. ನಿಗದಿತ ದರಕ್ಕಿಂತ ಹೆಚ್ಚಾಗಿ ಎರಡುಪಟ್ಟು ಹಣವನ್ನು ಪ್ರಯಾಣಿಕರಿಂದ ಖಾಸಗಿಯವರು ಕಿತ್ತುಕೊಂಡಿದ್ದಾರೆ. ಈ ಹಿಂದೆ ಇದ್ದ ದರವೇ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ ಖಾಸಗಿಯವರ ಸುಲಿಗೆ ಮಾತ್ರ ನಿಂತಿರಲಿಲ್ಲ.

# ರೋಡ್‍ಗಿಳಿದ ಟ್ಯಾಕ್ಸಿ, ಆಟೋ:
ಸಾರಿಗೆ ಬಸ್‍ಗಳ ಜೊತೆ ಇಂದು ರಾಜ್ಯಾದ್ಯಂತ ಆಟೋ, ಟ್ಯಾಕ್ಸಿ, ಮಾಕ್ಸಿ ಕ್ಯಾಬ್, ವೋಲಾ, ಊಬರ್, ಸರಕು ವಾಹನಗಳು ರಸ್ತೆಗಿಳಿದಿದ್ದವು. ಎರಡು ತಿಂಗಳ ಬಳಿಕ ಸಂಚಾರ ಆರಂಭಿಸಿದ್ದರಿಂದ ಬಹುತೇಕ ಚಾಲಕರಲ್ಲಿ ಆತಂಕ ದೂರವಾಗಿತ್ತು.

ಎರಡು ತಿಂಗಳು ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆದಿದ್ದ ಆಟೋ, ವೋಲಾ, ಊಬರ್ ಚಾಲಕರು ಇಂದು ರಸ್ತೆಗಿಳಿಯುತ್ತಿದ್ದಂತೆ ಮತ್ತೆ ಯಥಾಸ್ಥಿತಿ ಬರಲಿದೆ ಎಂಬ ವಿಶ್ವಾಸದಲ್ಲಿದ್ದರು.  ಹೀಗೆ ಮೊದಲ ದಿನವೇ ವಾಹನಗಳ ಸಂಚಾರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ವ್ಯಕ್ತವಾಗದಿದ್ದರೂ ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ.

Facebook Comments

Sri Raghav

Admin