ಕೆಎಸ್ಆರ್‌ಟಿಸಿ ಸಂಪೂರ್ಣ ಬಂದ್, ಬಿಎಂಟಿಸಿಯ 180 ಬಸ್ ಮಾತ್ರ ಸಂಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.26- ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಸಂಚಾರ ಸಂಪೂರ್ಣ ನಿಲ್ಲಿಸಿದೆ. ಆದರೆ ಬಿಎಂಟಿಸಿ ಭಾಗಶಃ ಬಸ್ ಸಂಚಾರವನ್ನು ಒದಗಿಸಿದೆ. ಜನತಾ ಕರ್ಫ್ಯೂ ಜಾರಿಯಾಗಿದ್ದ ಕಳೆದ ಭಾನುವಾರದಿಂದಲೂ ಕೊರೋನಾ ಸೊಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕೆಎಸ್ಆರ್ ಟಿಸಿ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ.

ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಮರು ಪ್ರಾರಂಭದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಕೆಎಸ್ಆರ್ ಟಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಬಿಎಂಟಿಸಿಯು 180 ಬಸ್ ಸೇವೆಯನ್ನು ನಗರದಲ್ಲಿ ಒದಗಿಸಿದೆ. ಅಗತ್ಯ ಸೇವೆಗಳನ್ನು ಒದಗಿಸುವ ಅವಶ್ಯಕತೆಯಿರುವ ಬೆಸ್ಕಾಮ್, ಬೆಂಗಳೂರು ಜಲಮಂಡಳಿ, ಬಿಬಿಎಂಪಿ, ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಪೆಟ್ರೋಲ್ ಬಂಕ್, ತರಕಾರಿ ಮಾರಾಟಗಾರರು, ಕಿರಾಣಿ ಅಂಗಡಿಗಳು, ಎಟಿಎಂಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಸ್ ಸೇವೆ ಒದಗಿಸಲಾಗಿದೆ ಎಂದು ಬಿಎಂಟಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಬಿಎಂಟಿಸಿ ಅಗತ್ಯ ಸೇವಾ ಸಿಬ್ಬಂದಿ ಪ್ರಯಾಣಿಸಲು ಬಸ್ ಸೌಲಭ್ಯವನ್ನು ಒದಗಿಸಿದ್ದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚಿನ ಪ್ರಯಾಣಿಕರನ್ನು ಬಸ್‌ನಲ್ಲಿ ಅನುಮತಿಸದಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಅಗತ್ಯ ಸೇವಾ ಸಿಬ್ಬಂದಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಇಲಾಖೆಯ ಗುರುತಿನ ಚೀಟಿ ಅಥವಾ ಕರ್ಫ್ಯೂ ಪಾಸ್ ಕಡ್ಡಾಯವಾಗಿದೆ. ಸರ್ಕಾರಿ ಅಥವಾ ಖಾಸಗಿ ವೈದ್ಯರು. ನರ್ಸ್ಗಳು, ವಾರ್ಡ್ ಬಾಯ್, ಫಾರ್ಮಸಿ ನೌಕರರು, ಭದ್ರತಾ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು, ರಕ್ತದಾನಿಗಳು ಬಸ್ ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಕ್ಟೋರಿಯಾ, ಮಾರ್ಥಾಸ್, ಕಿದ್ವಾಯಿ, ಸಾಗರ್, ನಿಮ್ಹಾನ್ಸ್, ರಾಜೀವ್ ಗಾಂಧಿ, ಜಯದೇವ, ಕೆಸಿಜನರಲ್, ವೈದೇಹಿ, ಸಪ್ತಗಿರಿ, ಬಿಜಿಎಸ್, ಸಕ್ರ, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಬನಶಂಕರಿ ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದಲೂ ಅಗತ್ಯ ಸೇವೆಯಲ್ಲಿರುವವರಿಗೆ ಬಸ್ ಸೇವೆ ಒದಗಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

Facebook Comments

Sri Raghav

Admin