ಜನರು ಕೊರೋನಾ ಸಂಕಷ್ಟದಲ್ಲಿರುವಾಗ ಸಾರಿಗೆ ಮುಷ್ಕರ ಬೇಕಿತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ಕೊರೊನಾ ಸಾಂಕ್ರಾಮಿಕ ರೋಗ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಸಾರಿಗೆ ಮುಷ್ಕರ ಮುಂದುವರಿಸುತ್ತಿರುವುದು ಸೂಕ್ತವೆ? ರಾಜ್ಯದಲ್ಲಿ ಕೊರೊನಾ ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ. ಎರಡನೆ ಅಲೆಯ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಸೋಂಕಿತರ ಸಂಖ್ಯೆ 15 ಸಾವಿರಕ್ಕೆ ಏರಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟುತ್ತಿದೆ. ಸಾವಿನ ಆರ್ಭಟ ಹೆಚ್ಚಾಗುತ್ತಿದೆ. ಆಸ್ಪತ್ರೆಗಳು ಸೋಂಕಿತರಿಂದ ತುಂಬುತ್ತಿವೆ. ಚಿತಾಗಾರಗಳಲ್ಲಿ ಶವಗಳನ್ನು ಸುಡಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ.

ಇಂತಹ ಸಂದರ್ಭದಲ್ಲಿ ಅಗತ್ಯ ಸೇವೆಯಾದ ಸಾರಿಗೆಯನ್ನು ಸಂಪೂರ್ಣ ಸ್ತಬ್ಧಗೊಳಿಸಿ ಸಾರ್ವಜನಿಕರಿಗೆ, ಸರ್ಕಾರಕ್ಕೆ ಸಂಕಷ್ಟ ತಂದೊಡ್ಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಕೊರೊನಾ ಆರಂಭ ಕಾಲದಲ್ಲಿ, ಲಾಕ್‍ಡೌನ್ ಸಂದರ್ಭದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ ಸಾರಿಗೆ ನೌಕರರ ಬಗ್ಗೆ ನಮಗೆ ಹೆಮ್ಮೆ ಇದೆ ನಿಜ. ಅವರಿಗೆ ಸಮಸ್ಯೆಗಳಿವೆ. ವೇತನ ಪರಿಷ್ಕರಣೆಗಾಗಿ ಆಗ್ರಹಿಸಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಸರ್ಕಾರಕ್ಕೆ ಅದರ ಬಿಸಿ ತಟ್ಟಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಎಲ್ಲರ ಸೇವೆಯ ಅಗತ್ಯವಿದೆ. ಸಾಂಕ್ರಾಮಿಕ ಸೋಂಕಿನ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ.ವೇತನ ಹೆಚ್ಚಳಕ್ಕೆ ಆಗ್ರಹಿಸಿ ನೀವೆಲ್ಲ ಸಾರಿಗೆ ಮುಷ್ಕರ ನಡೆಸುತ್ತಿರುವುದು ಸರಿ. ಅದು ಪ್ರಜಾಸತ್ತಾತ್ಮಕ ಹಕ್ಕು ಕೂಡ. ಆದರೆ, ವೇತನ ಹೆಚ್ಚಳ ಮಾಡಲು ಸರ್ಕಾರಕ್ಕೆ ಸಾಧ್ಯವಾಗದಿರುವಾಗ ಸಹಕರಿಸುವುದು ಕೂಡ ಜವಾಬ್ದಾರಿಯಾಗಿರುತ್ತದೆ. ವೇತನ ಹೆಚ್ಚಳ ಮಾಡುವುದು ಹೇಗೆ ಸರ್ಕಾರದ ಜವಾಬ್ದಾರಿಯೋ ಹಾಗೆಯೇ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿಯೂ ನೌಕರರದ್ದಾಗಿರುತ್ತದೆ.

ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದು ಇದ್ದೇ ಇದೆ. ಆದರೆ, ಈಗ ಕೊರೊನಾ ತುರ್ತು ಪರಿಸ್ಥಿತಿ ಇದೆ. ಗಲ್ಲಿ ಗಲ್ಲಿಗಳಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ.ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ನೀವೂ ಚೆನ್ನಾಗಿರಿ, ನಿಮ್ಮವರನ್ನೂ ಚೆನ್ನಾಗಿ ನೋಡಿಕೊಳ್ಳಿ. ಸಮಾಜದ ಸ್ವಾಸ್ಥ್ಯ ಕಾಪಾಡಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ರಾಜ್ಯದಲ್ಲಿ ಬಿಎಂಟಿಸಿ ಸೇರಿದಂತೆ ಸಾರಿಗೆಯ ನಾಲ್ಕು ನಿಗಮಗಳ 1.3 ಲಕ್ಷ ನೌಕರರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರತಿಭಟನೆ ಪ್ರಾರಂಭವಾದಾಗ ಪರಿಸ್ಥಿತಿ ಹೀಗಿರಲಿಲ್ಲ. 10 ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಉಲ್ಬಣವಾಗುತ್ತಲೇ ಇದೆ. ನಗರ ಪ್ರದೇಶಗಳಲ್ಲಷ್ಟೇ ಅಲ್ಲ, ಜಿಲ್ಲೆ, ತಾಲ್ಲೂಕು, ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಸಾರಿಗೆ ಸೇವೆಯ ಅಗತ್ಯವಿದೆ.

ಖಾಸಗಿ ಬಸ್‍ಗಳ ವ್ಯವಸ್ಥೆ ಇದ್ದರೂ ಅವರು ಕೊರೊನಾ ನಿಯಮಗಳನ್ನು ಪಾಲಿಸದೆ ಜನರನ್ನು ಹೇಗೆ ಬೇಕೋ ಹಾಗೆ ಬಸ್‍ಗಳಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಇದು ಕೂಡ ಕೊರೊನಾ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಆದರೆ, ಸರ್ಕಾರಿ ಬಸ್‍ಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಿ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತದೆ.ಪ್ರತಿಭಟನೆ ಹಿನ್ನೆಲೆಯಲ್ಲಿ ಬಹುತೇಕ ಬಸ್‍ಗಳ ಸಂಚಾರ ಸ್ಥಗಿತಗೊಂಡಿದೆ. ಈಗಲಾದರೂ ತಾತ್ಕಾಲಿಕವಾಗಿ ಸಾರಿಗೆ ನೌಕರರು ತಮ್ಮ ಪ್ರತಿಭಟನೆ ಕೈಬಿಟ್ಟು ಕೊರೊನಾ ಮುಕ್ತವಾದ ನಂತರ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಆರನೆ ವೇತನ ಆಯೋಗದ ಶಿಫಾರಸಿಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ತಟ್ಟೆ, ಲೋಟ ಬಡಿದು ಪ್ರತಿಭಟನೆ, ಭಿಕ್ಷಾಟನೆ ಮೂಲಕ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಕ್ಯಾಂಡಲ್ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರಿಸಿದ್ದಾರೆ. ಸರ್ಕಾರ ಇವರ ಯಾವುದೇ ಪ್ರತಿಭಟನೆಗೆ ಜಪ್ಪಯ್ಯ ಎಂದಿಲ್ಲ. ಸತತವಾಗಿ ಉಲ್ಬಣಗೊಳ್ಳುತ್ತಿರುವ ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ತೊಡಗಿದೆ.

ಹಾಗಾಗಿ ನೌಕರರು ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳುವುದು ಸೂಕ್ತ ಎಂದೆನಿಸುತ್ತದೆ. ಈ ಉಗ್ರರೂಪದ ಪ್ರತಿಭಟನೆಯನ್ನು ಲಾಕ್‍ಡೌನ್ ಸಂದರ್ಭದಲ್ಲಿ ಮಾಡಿದ್ದರೆ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ವಸಂತ ಮಾಸದಲ್ಲಿ ಅದರಲ್ಲೂ ಸಾಲು ಸಾಲು ರಜೆ, ಹಬ್ಬಗಳ ಸಂದರ್ಭದಲ್ಲಿ ಮುಷ್ಕರ ಮಾಡಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದಿರಿ.

ಸಂಕಷ್ಟ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ತುಂಬಲಾರದಷ್ಟು ನಷ್ಟ ಉಂಟುಮಾಡುವುದಕ್ಕಿಂತ ಸದ್ಯ ಮುಷ್ಕರ ಹಿಂಪಡೆದು ಸಾರ್ವಜನಿಕರ ಅನುಕಂಪ ಗಳಿಸಿಕೊಂಡು ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಸೂಕ್ತವೆಂದೆನಿಸುತ್ತದೆ.

# ಕೆ.ಎಸ್.ಜನಾರ್ಧನ್

Facebook Comments