ಜನರ ಸಮಸ್ಯೆಗೆ ಒತ್ತು ಕೊಟ್ಟ ಸರ್ಕಾರ, ಸಾರ್ವಜನಿಕರ ಸೇವೆಗಾಗಿ ಪರ್ಯಾಯ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.10- ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಸಿಬ್ಬಂದಿಗಳ ಸಮಸ್ಯೆಗಿಂತ ಸಾರ್ವಜನಿಕರ ಸಮಸ್ಯೆಗೆ ಹೆಚ್ಚು ಗಮನ ಹರಿಸಿದ್ದು, ಸಾರ್ವಜನಿಕರ ಸೇವೆಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲು ಹೆಚ್ಚು ಒತ್ತು ಕೊಡುತ್ತಿದೆ. ಸಾರಿಗೆ ಸೇವೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾದ ನಡುವೆಯೂ ನಾಲ್ಕು ಸಾರಿಗೆ ನಿಗಮಗಳಿಂದ ಸಾವಿರಕ್ಕೂ ಹೆಚ್ಚು ಬಸ್‍ಗಳು ಇಂದು ಸಂಚಾರ ನಡೆಸಿವೆ.

ಖಾಸಗಿ ಬಸ್, ಟೆಂಪೋ, ಮಿನಿ ಬಸ್‍ಗಳು ರಸ್ತೆಗಿಳಿದಿದ್ದು, ಸಾರ್ವಜನಿಕರಿಗೆ ಸೇವೆ ಒದಗಿಸಿದರೂ ಕೂಡ ಸಾಲು ಸಾಲು ರಜೆ, ಹಬ್ಬ ಹಾಗೂ ವೀಕೆಂಡ್ ಇರುವು ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು. ನಿವೃತ್ತ ನೌಕರರು, ತರಬೇತುದಾರ ಸೇವೆ ಬಳಸಿಕೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿದೆ.

ಈ ನಡುವೆ ಮುಷ್ಕರ ನಿರತರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸುವ ಪ್ರಯತ್ನವೂ ನಡೆದಿದೆ. ಖಾಸಗಿ ಬಸ್‍ಗಳ ಸೇವೆಯೂ ಎಂದಿನಂತೆ ಮುಂದುವರಿದಿದ್ದು, ಹಬ್ಬ ಹಾಗೂ ಸಾಲು ಸಾಲು ರಜೆ ಇರುವುದರಿಂದ ಖಾಸಗಿ ಬಸ್‍ಗಳು ಹೆಚ್ಚಾಗಿಯೇ ಸಂಚಾರ ನಡೆಸಿದವು. ಮುಷ್ಕರ ಹತ್ತಿಕ್ಕಲು ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆ. ಸಿಬ್ಬಂದಿಗಳಿಗೆ ನೀಡಿದ ಕ್ವಾಟ್ರರ್ಸ್‍ಗಳನ್ನು ಖಾಲಿ ಮಾಡಲು ನೋಟಿಸ್ ನೀಡಿದೆ. ಮುಷ್ಕರ ನಿಷೇಧ ಕಾನೂನನ್ನು ಜಾರಿಗೊಳಿಸಿದೆ. ನೌಕರರ ವರ್ಗಾವಣೆ ಅಸ್ತ್ರವನ್ನು ಪ್ರಯೋಗ ಮಾಡಿದೆ. ಈ ಎಲ್ಲದರ ನಡುವೆಯೂ ನೌಕರರು ಮುಷ್ಕರವನ್ನು ಮುಂದುವರಿಸಿದ್ದಾರೆ.

ಚಿಕ್ಕಮಗಳೂರು, ಯಾದಗಿರಿ, ಮಂಡ್ಯ ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರು ಸರ್ಕಾರಿ ಬಸ್ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಬಸ್ ಮುಷ್ಕರ ಇದೆ ಎಂದು ನಮಗೆ ಬಸ್ ಓಡಿಸಲು ಅನುಮತಿ ನೀಡಲಾಗಿತ್ತು. ಆದರೆ, ಸರ್ಕಾರಿ ಬಸ್‍ಗಳು ಸಂಚರಿಸುತ್ತಿರುವುದರಿಂದ ನಮಗೆ ನಷ್ಟವಾಗಿದೆ. ನೀವು ಬಸ್ ಓಡಿಸಿ, ಇಲ್ಲ ನಮಗೆ ಬಿಡಿ ಎಂದು ವಾಗ್ವಾದ ನಡೆಸಿದ್ದು, ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ಸಾರಿಗೆ ಬಸ್‍ಗಳನ್ನು ಸಂಚರಿಸಲಾಯಿತು.

ತರಬೇತುದಾರರಿಂದ ಬಸ್ ಓಡಿಸಲು ಮಾಡಿದ ಪ್ರಯತ್ನದಲ್ಲಿ ಹಲವು ಎಡವಟ್ಟುಗಳು ನಡೆದಿವೆ. ಯಾದಗಿರಿಯಲ್ಲಿ ಟ್ರೈನಿಗಳ ಮೂಲಕ ಬಸ್ ಓಡಿಸುವ ಸಂದರ್ಭದಲ್ಲಿ ಎಡವಟ್ಟಾಗಿದ್ದು, ಬಸ್‍ನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ.

ಈ ನಡುವೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಮ್ಮ ಪಟ್ಟನ್ನು ಮುಂದುವರಿಸಿದ್ದಾರೆ. ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬೆಳಗಾವಿಯಲ್ಲಿ ಇಂದು ಸಾರಿಗೆ ನೌಕರರ ಮುಖಂಡರ ಸಭೆ ಕರೆದಿದ್ದು, ನಾಳೆ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸುವ ನಿರ್ಧಾರ ಮಾಡಿದ್ದಾರೆ.

ನಾಳೆ ನೌಕರರ ಕುಟುಂಬದೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ಮಾರ್ಚ್ ತಿಂಗಳ ವೇತನವನ್ನೂ ಕೊಟ್ಟಿಲ್ಲ. ಇಷ್ಟೊಂದು ಹೃದಯ ಹೀನ ಸರ್ಕಾರ ಇದಾಗಿದೆ. ದುಡಿಯುವ ವರ್ಗಕ್ಕೆ ಸಾಕಷ್ಟು ಅನ್ಯಾಯ ಮಾಡುತ್ತಿದೆ. ಮುಷ್ಕರ ನಿಷೇಧ ಮಾಡಿರುವುದು ಕಾನೂನು ಬಾಹಿರ ಕ್ರಮವಾಗಿದ್ದು, ನಾವು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವುದು ಬಿಟ್ಟು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನಾವು ನ್ಯಾಯಮಾರ್ಗದಲ್ಲಿ ಹೋರಾಟ ಮಾಡುತ್ತಿದ್ದೇವೆ. ಕರ್ತವ್ಯಕ್ಕೆ ಹಾಜರಾಗದೆ ಹೋರಾಟಕ್ಕಿಳಿದಿದ್ದೇವೆ. ಇಂದು ಎಲ್ಲ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ. ಒತ್ತಡ ಹೇರಿ, ಬೆದರಿಕೆಯೊಡ್ಡಿ ಹಲವು ನೌಕರರನ್ನು ಕರ್ತವ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಕೆಲಸಕ್ಕೆ ಹೋಗುವವರಿಗೆ ನಾವು ಅಡ್ಡಿಪಡಿಸುವುದಿಲ್ಲ. ಸರ್ಕಾರದ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

Facebook Comments