ಸಾರಿಗೆ ನೌಕರರ ಮುಷ್ಕರ, ಖಾಸಗೀಯವರ ಕಾರುಬಾರು, ಪ್ರಯಾಣಿಕರ ಪರದಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಆರನೆ ವೇತನ ಆಯೋಗ ಶಿಫಾರಸು ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರು ಪರದಾಡುವಂತಾಯಿತು. ರಾಜ್ಯದ 31 ಜಿಲ್ಲೆಗಳಲ್ಲಿ ಸಾರಿಗೆ ಬಸ್‍ಗಳ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಪ್ರಯಾಣಿಕರಿಗೆ ತೊಂದರೆಯಾಗಬಾರದೆಂಬ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ಬಸ್, ಟೆಂಪೋಗಳಿಗೆ ತಾತ್ಕಾಲಿಕ ಅನುಮತಿ ನೀಡಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಖಾಸಗಿ ಬಸ್‍ಗಳು ಪ್ರಯಾಣಿಕರಿಗೆ ಸೇವೆ ಒದಗಿಸಿದವು.

ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬೆಂಗಳೂರು, ತುಮಕೂರು, ಮಂಗಳೂರು, ರಾಣಿ ಚೆನ್ನಮ್ಮ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬೆಂಗಳೂರಿನ ಮೆಜಸ್ಟಿಕ್ ಬಸ್ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟಲೈಟ್, ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್, ಮಿನಿ ಬಸ್‍ಗಳ ಕಾರುಬಾರು ಹೆಚ್ಚಾಗಿತ್ತು. ಆಟೋ, ಟ್ಯಾಕ್ಸಿ, ಖಾಸಗಿ ಬಸ್‍ಗಳಲ್ಲಿ ಜನ ಪ್ರಯಾಣಿಸುತ್ತಿದ್ದರಾದರೂ ನಿರೀಕ್ಷೆಯಂತೆ ತಮ್ಮ ಸ್ಥಳಗಳಿಗೆ ತೆರಳಲು ಬಸ್‍ಗಳು ಸಿಗದಿದ್ದರಿಂದ ತೀವ್ರ ತೊಂದರೆ ಅನುಭವಿಸಬೇಕಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ಮೆಟ್ರೋ ಸೇವೆಯನ್ನು ಕೂಡ ಹೆಚ್ಚಳ ಮಾಡಲಾಗಿದೆ. ಮೆಟ್ರೋ ನಿಲ್ದಾಣ ಜನಜಂಗುಳಿಯಿಂದ ಕೂಡಿತ್ತು.

ಬೆಂಗಳೂರಿನಿಂದ ಮೈಸೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ ಸೇರಿದಂತೆ ಬೇರೆ ಬೇರೆ ಸ್ಥಳ ಹಾಗೂ ರಾಜ್ಯಗಳಿಗೆ ತೆರಳಲು ಬಸ್‍ಗಳಿಲ್ಲದೆ ಜನ ಪರದಾಡುತ್ತಿದ್ದರು. ಬಿಎಂಟಿಸಿ ಹಾಗೂ ನಾಲ್ಕು ಸಾರಿಗೆ ನಿಗಮಗಳ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಸರ್ಕಾರ ನೌಕರರ ಯಾವುದೇ ಬೇಡಿಕೆಗಳಿಗೆ ಮಣಿಯುತ್ತಿಲ್ಲ. ಈ ಹಗ್ಗ-ಜಗ್ಗಾಟದ ನಡುವೆ ಸಾರ್ವಜನಿಕ ಪ್ರಯಾಣಿಕರು ಇಂದು ಹೈರಾಣಾದರು.

ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಮತ್ತಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ತಿಂಗಳ ಪಾಸ್ ಪಡೆದಿರುವವರು ಖಾಸಗಿ ಬಸ್‍ಗಳಲ್ಲಿ, ಟೆಂಪೋ, ಆಟೋಗಳಲ್ಲಿ ಹಣ ಕೊಟ್ಟು ಓಡಾಡಬೇಕು ಎಂದು ಸರ್ಕಾರ ಹಾಗೂ ಮುಷ್ಕರ ನಿರತ ಸಾರಿಗೆ ನೌಕರರಿಗೆ ಹಿಡಿಶಾಪ ಹಾಕುತ್ತಿದ್ದರು. ನಿನ್ನೆಯಷ್ಟೆ ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳಲ್ಲಿ ನಡೆದ ಚುನಾವಣೆಗೆ ಮತದಾನಕ್ಕೆ ತೆರಳಿ ಹಿಂದಿರುಗಿದವರು ಬಿಎಂಟಿಸಿ ಬಸ್ ಇಲ್ಲದೆ ಫಜೀತಿ ಅನುಭವಿಸಿದ್ದು ಕಂಡುಬಂತು.

ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಬೆಂಗಳೂರಿನ ಮೆಜಸ್ಟಿಕ್‍ನಲ್ಲೂ ತೊಂದರೆಗೆ ಸಿಲುಕಿದ ಹಲವರು ಬಸ್‍ಗಳಿಲ್ಲದೆ ಆಟೋ, ಟ್ಯಾಕ್ಸಿಗಳಿಗೆ ಕೊಡಲು ಹಣವಿಲ್ಲದೆ ಪರದಾಡುತ್ತಿದ್ದರು. ಕಳೆದ ಡಿಸೆಂಬರ್‍ನಲ್ಲಿ ಸಾರಿಗೆ ನೌಕರರ ಮುಷ್ಕರ ನಡೆದಾಗ ಎಲ್ಲ ನೌಕರರೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿದ್ದನ್ನು ವಿರೋಧಿಸಿದ್ದರು. ಆದರೆ, ನಿನ್ನೆ ಪೊಲೀಸ್ ಆಯುಕ್ತ ಕಮಲ್‍ಪಂತ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಕೊರೊನಾ ಇರುವುದರಿಂದ ಯಾರೂ ಪ್ರತಿಭಟನೆ ನಡೆಸಬಾರದು. ಯಾರಾದರೂ ನೌಕರರು ಪ್ರತಿಭಟನೆಗಿಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎಲ್ಲ ನೌಕರರೂ ತಮ್ಮ ಕರ್ತವ್ಯ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದಿದ್ದಾರೆ. ಅತ್ತ ಮೈಸೂರು ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣಗಳೂ ಬಿಕೋ ಎನ್ನುತ್ತಿದ್ದವು. ಅಲ್ಲೂ ಕೂಡ ಖಾಸಗಿ ವಾಹನಗಳು ಓಡಾಡಲು ಅನುಮತಿ ನೀಡಲಾಗಿತ್ತು.

ರಾಮನಗರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್‍ಗಳ ಕಾರುಬಾರು ಹೆಚ್ಚಾಗಿತ್ತು. ಹುಬ್ಬಳ್ಳಿ-ಧಾರವಾಡ ಬೇಂದ್ರೆ ಬಸ್ ನಿಲ್ದಾಣದಲ್ಲೂ ಕೂಡ ಎಲ್ಲ ಸಾರಿಗೆ ಬಸ್‍ಗಳು ನಿಂತಲ್ಲಿಯೇ ನಿಂತಿದ್ದವು. ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಹಾವೇರಿ, ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಎಲ್ಲ ಕಡೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಬಸ್ ಸಂಚಾರ ಸ್ಥಗಿತಗೊಳಿಸಿದರು. ಸಾರ್ವಜನಿಕರು ಖಾಸಗಿ ವಾಹನಗಳ ಮೊರೆ ಹೋದರು.

ಬಸ್ ಮುಷ್ಕರದಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಹಲವೆಡೆ ಆಸ್ಪತ್ರೆಗಳಿಗೆ, ರೈತರು ಮಾರುಕಟ್ಟೆಗಳಿಗೆ ಹೋಗಲು ಆಗದೆ ತೊಂದರೆ ಅನುಭವಿಸಬೇಕಾಯಿತು.

Facebook Comments