ನಾಳೆ ಭಾರತ್ ಬಂದ್‌ : ಕೆಎಸ್‌ಆರ್‌ಟಿಸಿ-ಬಿಎಂಟಿಸಿ-ಮೆಟ್ರೋ ಸೇವೆಗೆ ಯಾವುದೇ ಅಡ್ಡಿಯಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.7- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಲಿದೆ.
ಮುಷ್ಕರಕ್ಕೆ ಆಟೋ ಸಂಘಟನೆಗಳು, ಗಾರ್ಮೆಂಟ್ಸ್ ನೌಕರರು, ಎಪಿಎಂಪಿ ನೌಕರರು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ನೀಡುತ್ತಿರುವುದರಿಂದ ಜನ ಜೀವನ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಾಗಿದೆ.

ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ನೌಕರರು ಬಂದ್‍ನಲ್ಲಿ ಪಾಲ್ಗೊಳ್ಳಬಾರದು ಎಂದು ಕಟ್ಟಪ್ಪಣೆ ಮಾಡಿದ್ದರೂ ಕೂಡ ನಾಳಿನ ಮುಷ್ಕರದ ಪರಿಸ್ಥಿತಿ ನೋಡಿಕೊಂಡು ಬಸ್‍ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ಮುಷ್ಕರದ ತೀವ್ರತೆ ಹೆಚ್ಚಾದರೆ ಸಾರ್ವಜನಿಕ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಅಂಚೆ ಕಚೇರಿ, ಎಲ್‍ಐಸಿ, ಎಪಿಎಂಸಿ, ಮಾರುಕಟ್ಟೆ, ಖಾಸಗಿ ಬಸ್‍ಗಳ ಸೇವೆ ಕೂಡ ಸ್ತಬ್ಧವಾಗುವ ಸಾಧ್ಯತೆ ಇದೆ.

ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಹೇಳಲಾಗುತ್ತಿದೆಯಾದರೂ ನಾಳಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುವುದಾಗಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ. ಮುಷ್ಕರದ ಪರಿಣಾಮ ಗಂಭೀರವಾದರೆ ರಜೆ ನೀಡುವ ತೀರ್ಮಾನವನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಮೆಟ್ರೋ ಸೇವೆಗೆ ಯಾವುದೇ ಅಡ್ಡಿಯಿಲ್ಲ ಎಂದು ಮೆಟ್ರೋ ನಿಗಮದ ಮುಖ್ಯಸ್ಥರು ತಿಳಿಸಿದ್ದಾರೆ. ಮುಷ್ಕರಕ್ಕೆ ಕರೆ ಕೊಟ್ಟಿರುವ ಕಾರ್ಮಿಕ ಸಂಘಟನೆಗಳು ಲಾರಿ ಮಾಲೀಕರ, ಚಾಲಕರ ಸಂಘಗಳ ಒಕ್ಕೂಟದ ಬೆಂಬಲ ಕೇಳಿಲ್ಲ. ಆದರೂ ನಾವು ನೈತಿಕವಾಗಿ ಬೆಂಬಲ ನೀಡುತ್ತೇವೆ. ನಮ್ಮ ಲಾರಿಗಳು ಯಥಾಸ್ಥಿತಿಯಲ್ಲಿ ಓಡಾಟ ಮಾಡುತ್ತವೆ. ಮುಷ್ಕರದ ಪರಿಣಾಮ ತೀವ್ರಗೊಂಡರೆ ಚಾಲಕರು ಮತ್ತು ಲಾರಿಯಲ್ಲಿರುವ ವಸ್ತುಗಳ ರಕ್ಷಣೆಯ ಹಿನ್ನೆಲೆಯಲ್ಲಿ ಓಡಾಟವನ್ನು ನಿಲ್ಲಿಸಲು ಸೂಚಿಸಲಾಗುವುದು ಎಂದು ಲಾರಿ ಮಾಲೀಕರು ಮತ್ತು ಚಾಲಕರ ಒಕ್ಕೂಟದ ಅಧ್ಯಕ್ಷ ಷಣ್ಮುಖಪ್ಪ ತಿಳಿಸಿದ್ದಾರೆ.

ಎಪಿಎಂಸಿ ವಹಿವಾಟು ಸಂಪೂರ್ಣ ಬಂದ್ ಆಗಲಿದೆ. ಮುಷ್ಕರಕ್ಕೆ ಬೆಂಬಲ ನೀಡಿ ಇಲ್ಲಿನ ಕಾರ್ಮಿಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಹಾಗಾಗಿ ನಾಳೆ ಹಣ್ಣು, ತರಕಾರಿ, ದಿನಸಿ ಪದಾರ್ಥಗಳ ವಹಿವಾಟು ನಡೆಯುವ ಸಾಧ್ಯತೆ ಕ್ಷೀಣವಾಗಿದೆ. ದೇಶದ ಎಲ್ಲಾ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಬ್ಯಾಂಕ್ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. ಎಸ್‍ಬಿಐ ಹೊರತಾಗಿ ಎಲ್ಲಾ ಬ್ಯಾಂಕ್ ವಹಿವಾಟು ಸಂಪೂರ್ಣವಾಗಿ ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಹಾರಕ್ಕೆ ಅಡ್ಡಿಯಾಗಲಿವೆ.

ರಾಯಚೂರಿನ ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ಕಲಬುರಗಿ, ಹಾವೇರಿ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ನಗರ ಪ್ರದೇಶಗಳಲ್ಲೂ ಕೂಡ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿವೆ.

ಬಾಗಲಕೋಟೆಯಲ್ಲಿ 11ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಗೆ ವೇದಿಕೆಯನ್ನು ಸಿದ್ದಮಾಡಿಕೊಂಡಿವೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ ಜಿಲ್ಲೆಯಲ್ಲೂ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿವೆ. ಪ್ರತಿಭಟನಾ ರ್ಯಾಲಿ ನಡೆಸಲು ಅವಕಾಶವಿಲ್ಲ. ಯಾವುದೇ ಸರ್ಕಾರಿ ಆಸ್ತಿ ಪಾಸ್ತಿ ನಷ್ಟ ಮಾಡಿದರೆ ಆಯೋಜಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಕಟ್ಟೆಚ್ಚರ ನೀಡಿದೆ. ಹೀಗಾಗಿ ಕಾರ್ಮಿಕರು ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.

ಬೇಡಿಕೆಗಳು:
ಖಾಸಗಿ ನೌಕರರ ಪಿಂಚಣಿಗೆ 10 ಸಾವಿರ ನೀಡಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು; ಮಹಿಳಾ ಕಾರ್ಮಿಕರಿಗೆ ರಾತ್ರಿಪಾಳಿ ರದ್ದು ಮಾಡುವುದು; ಕಾರ್ಮಿಕರ ವೇತನವನ್ನು 21 ಸಾವಿರಕ್ಕೆ ಹೆಚ್ಚಿಸುವುದು; ಸಾರ್ವಜನಿಕ ಉದ್ಯಮವನ್ನು ಖಾಸಗಿಕರಣ ಮಾಡಬಾರದು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ ಬಂದ್‍ಗೆ ಕರೆ ನೀಡಲಾಗಿದೆ.

Facebook Comments