ಅಂಬಾರಿ, ಐರಾವತ ಮತ್ತು ರಾಜಹಂಸ ಹೊಸ ಬಸ್‌ಗಳಿಗೆ ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.7- ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಮಾದರಿಯ 20 ಹಾಗೂ ಬಿಎಂಟಿಸಿಯ ಐದು ಬಸ್‍ಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಚಾಲನೆ ನೀಡಿದರು. ವಿಧಾನಸೌಧ ಮುಂಭಾಗ ಐದು ಅಂಬಾರಿ ಡ್ರೀಮ್‍ಕ್ಲಾಸ್, ಮೂರು ಐರಾವತ್ ಕ್ಲಬ್ ಕ್ಲಾಸ್, ನಾಲ್ಕು ಐರಾವತ, ಎರಡು ರಾಜಹಂಸ, ಒಂದು ನಾನ್ ಎಸಿ ಸ್ಲೀಪರ್, ಐದು ಕರ್ನಾಟಕ ಸಾರಿಗೆ ಹಾಗೂ ಬಿಎಂಟಿಸಿಯ ಐದು ಬಸ್‍ಗಳಿಗೆ ಸಿಎಂ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬಿಎಂಟಿಸಿ ಪ್ರತಿ ದಿನ ಸರಾಸರಿ 8.99 ಕೋಟಿ ಆದಾಯವನ್ನು ಗಳಿಸುವ ಮೂಲಕ ಸರಾಸರಿ 30 ಲಕ್ಷ ಜನರಿಗೆ ಸಾರಿಗೆ ಸೇವೆ ಒದಗಿಸುತ್ತಿದೆ. ಇದು ದೇಶದಲ್ಲಿಯೇ ಐದನೇ ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು, ವಿಶ್ವದರ್ಜೆಯ ವಿವಿಧ ವಿನ್ಯಾಸದ ಹೊಸ ಬಸ್‍ಗಳು, ಸುಸಜ್ಜಿತವಾದ ನಿಲ್ದಾಣಗಳನ್ನು ಹೊಂದಿದೆ ಎಂದರು. ಮಾಹಿತಿ ತಂತ್ರಜ್ಞಾನ, ಪಾರದರ್ಶಕ ನೇಮಕಾತಿ, ವೃತ್ತಿಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ನಿರ್ವಹಣೆ, ಸಾಮಾಜಿಕ ಹೊಣೆಗಾರಿಕೆಯನ್ನು ಕಾಪಾಡಿಕೊಂಡು ದೇಶದ ಅಗ್ರಗಣ್ಯ ರಸ್ತೆ ಸಾರಿಗೆ ಸಂಸ್ಥೆಯಾಗಿ ಹೊರ ಹೊಮ್ಮಿದೆ ಎಂದು ಸಿಎಂ ಶ್ಲಾಘಿಸಿದರು.

ಕೆಎಸ್‍ಆರ್‍ಟಿಸಿಯ ಉಪಕ್ರಮಗಳು ಹಾಗೂ ಪ್ರಯಾಣಿಕ ಸ್ನೇಹಿ ಸೇವೆಯನ್ನು ಶ್ಲಾಘಿಸಿ 240ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ರಾಜ್ಯದೊಳಗೆ ಮತ್ತು ಅಂತಾರಾಜ್ಯ ಸ್ಥಳಗಳಿಗೆ ಸುರಕ್ಷಿತ, ಆರಾಮದಾಯಕ ಹಾಗೂ ಐಷಾರಾಮಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದರು. ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತಿದ್ದು, ಸಾರ್ವಜನಿಕರು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ತಮ್ಮ ತವರು ಕ್ಷೇತ್ರ ಶಿಕಾರಿಪುರಕ್ಕೆ ತೆರಳುವ ಐರಾವತಬಸ್‍ನಲ್ಲಿ ಸ್ವಲ್ಪ ದೂರ ಮುಖ್ಯಮಂತ್ರಿಗಳು ಪ್ರಯಾಣಿಸಿದರು. ಬೆಂಗಳೂರಿನಿಂದ ಎರ್ನಾಕುಲಮ್, ಹೈದಾರಾಬಾದ್, ನೆಲ್ಲೂರು, ರಾಯಚೂರಿಗೆ ಅಂಬಾರಿ ಡ್ರೀಮ್ ಕ್ಲಾಸ್, ಬೆಂಗಳೂರಿನಿಂದ ಶಿರಡಿ, ತಿರುನಲ್ಲಾರ್, ಶೃಂಗೇರಿಗೆ ಐರಾವತ್ ಕ್ಲಬ್ ಕ್ಲಾಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.

ಬೆಂಗಳೂರಿನಿಂದ ಕಾನಂಗಾಡ್, ಪಂಪ, ಚನ್ನೈ, ದಾವಣಗೆರೆ ಐರಾವತ್ ಬಸ್‍ಗಳು. ಬೆಂಗಳೂರಿನಿಂ ಶ್ರೀಶೈಲಂಗೆ ನಾನ್ ಎಸಿ ಸ್ಲೀಪರ್ ಬಸ್ ಹಾಗೂ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ರಾಜಹಂಸ ಬಸ್‍ನ್ನು ಪ್ರಾರಂಭಿಸಲಾಗಿದೆ. ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿಖಾ, ಕೆಎಸ್‍ಆರ್‍ಟಿಸಿ ನಿರ್ದೇಶಕಿ ಕವಿತಾ ಮನ್ನಿಕೇರಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments