ಪ್ರತಿಭಟನೆಗೆ ಜಗ್ಗದ ಸರ್ಕಾರ, ಎಸ್ಮಾ ಬ್ರಹ್ಮಾಸ್ತ್ರ ಬಳಸಲು ಚಿಂತನೆ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ಆರನೆ ವೇತನ ಆಯೋಗ ಹಾಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಜಗ್ಗದ ರಾಜ್ಯ ಸರ್ಕಾರ ಇಂದು ಸಂಜೆ ಬ್ರಹ್ಮಾಸ್ತ್ರ ಬಳಸಲು ಮುಂದಾಗಿದೆ. ಬೆಳಗಾವಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ಸಾರಿಗೆ ನೌಕರರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ. ಕಳೆದ ಎರಡು ದಿನಗಳಿಂದ ಸರ್ಕಾರದ ಮನವಿಗೂ ಸ್ಪಂದಿಸದೆ, ಸಾರ್ವಜನಿಕರಿಗೆ ತೊಂದರೆ ಕೊಟ್ಟು ಮುಷ್ಕರ ನಡೆಸುತ್ತಿರುವ ನೌಕರರ ಮೇಲೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ), ವಿಪತ್ತು ನಿರ್ವಹಣಾ ಕಾಯ್ದೆ ಸೇರಿದಂತೆ ಹಲವು ರೀತಿಯ ಕಾನೂನು ಕ್ರಮಗಳನ್ನು ಜರುಗಿಸಲು ಸರ್ಕಾರ ಮುಂದಾಗಿದೆ.

ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ಮುಷ್ಕರ ಕೈ ಬಿಡುವಂತೆ ಮನವಿ ಮಾಡಿಕೊಂಡರೂ ನೌಕರರು ಸೊಪ್ಪು ಹಾಕಿಲ್ಲ. ಇದರಿಂದ ಕೆರಳಿ ಕೆಂಡವಾಗಿರುವ ಸರ್ಕಾರ ನೌಕರರ ಮೇಲೆ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರಿ ನೌಕರರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಪ್ರತಿಭಟನೆ ಕೈ ಬಿಡುವಂತೆ ಪದೇ ಪದೇ ಮನವಿ ಮಾಡಿಕೊಂಡರೂ ಜಗ್ಗಲಿಲ್ಲ. ಕೊನೆಗೆ ಒಂದು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಜಾರಿ ಮಾಡಿ ಸರ್ಕಾರಿ ಸೇವೆಯಿಂದಲೇ ಅಮಾನತು ಮಾಡಿದ್ದರು.

ಇದೀಗ ಇದೇ ಅಸ್ತ್ರ ಮುಂದಿಟ್ಟುಕೊಂಡಿರುವ ರಾಜ್ಯ ಸರ್ಕಾರ ಒಂದು ವೇಳೆ ನಾಳೆ ಸಂಜೆಯೊಳಗೆ ಸಾರಿಗೆ ಸಿಬ್ಬಂದಿ ಪ್ರತಿಭಟನೆಯನ್ನು ಕೈ ಬಿಡದಿದ್ದರೆ ಎಸ್ಮಾ, ವಿಪತ್ತು ನಿರ್ವಹಣಾ ಕಾಯ್ದೆ, ಶಿಸ್ತುಕ್ರಮ, ಸೇವೆಯಿಂದ ಅಮಾನತು ಸೇರಿದಂತೆ ಹಲವು ರೀತಿಯ ಕಾನೂನು ಕ್ರಮಗಳನ್ನು ಬಳಸಲು ಮುಂದಾಗಿದೆ. ಸಾರಿಗೆ ಇಲಾಖೆಯಲ್ಲಿ ತರಬೇತಿ ಹಂತದಲ್ಲಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ಬಸ್ ಸಂಚಾರ ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಯುಗಾದಿ ಹಬ್ಬ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಲು ಸರ್ಕಾರಿ ವಾಹನಗಳನ್ನೇ ಅವಲಂಬಿಸುತ್ತಾರೆ. ಅವರಿಗೆ ತೊಂದರೆಯಾಗದ ರೀತಿಯಲ್ಲಿ ಈಗಾಗಲೇ ರೈಲ್ವೆ ವ್ಯವಸ್ಥೆ, ಖಾಸಗಿ ಬಸ್ ಸಂಚಾರವನ್ನೂ ಪ್ರಾರಂಭಿಸಲಾಗಿದೆ. ಇಂದಿನಿಂದ ಹೆಚ್ಚುವರಿಯಾಗಿ 20 ಸಾವಿರ ಖಾಸಗಿ ವಾಹನಗಳನ್ನು ತೆಗೆದುಕೊಳ್ಳುವುದು, ನಾಳೆ ಇದಕ್ಕಿಂತಲೂ ಹೆಚ್ಚು ಖಾಸಗಿ ಬಸ್‍ಗಳನ್ನು ಬಳಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಜತೆ ಸಂಜೆ ದೂರವಾಣಿ ಮೂಲಕ ಮಾತುಕತೆ ನಡೆಸಲಿರುವ ಬಿಎಸ್‍ವೈ ರಾಜ್ಯಕ್ಕೆ ಇನ್ನಷ್ಟು ಹೆಚ್ಚಿನ ರೈಲುಸೇವೆ ಒದಗಿಸಬೇಕೆಂದು ಮನವಿ ಮಾಡಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಾರಿಗೆ ಸಿಬ್ಬಂದಿ ಮುಷ್ಕರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವುದರಿಂದ ಮಾತುಕತೆಯಾಗಲಿ ಅಥವಾ ಸಂಧಾನ ನಡೆಸಲೇಬಾರದೆಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ.

ಅದರಲ್ಲೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಪ್ರತಿಭಟನೆಯನ್ನು ರಾಜಕೀಯ ಪಕ್ಷವೊಂದಕ್ಕೆ ಅನುಕೂಲ ಮಾಡಿಕೊಡಲೆಂದೇ ಸಾರಿಗೆ ಸಿಬ್ಬಂದಿಯನ್ನು ಎತ್ತಿ ಕಟ್ಟಿದ್ದಾರೆ ಎಂಬ ಅನುಮಾನವನ್ನು ಸರ್ಕಾರ ವ್ಯಕ್ತಪಡಿಸಿದೆ.

ಈ ಹಿಂದೆಯೂ ಸಾರಿಗೆ ನೌಕರರು ಪ್ರತಿಭಟನೆ ನಡೆಸುವಾಗ ಕೋಡಿಹಳ್ಳಿ ಚಂದ್ರಶೇಖರ್ ಮಧ್ಯ ಪ್ರವೇಶ ಮಾಡಿದ್ದರಿಂದಲೇ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಮುಷ್ಕರ ನಡೆಸುತ್ತಿರುವ ನೌಕರರ ಜತೆ ಮಾತುಕತೆಯಾಗಲಿ, ಸಂಧಾನವಾಗಲಿ ನಡೆಸದೆ ಕಾನೂನು ಅಸ್ತ್ರ ಬಳಸಲು ಸರ್ಕಾರ ಸಜ್ಜಾಗಿದೆ.

Facebook Comments