ಟೈರ್ ಬ್ಲಾಸ್ಟ್ ಆಗಿ ಪೆಟ್ರೋಲ್‍ಬಂಕ್‍ವೊಂದಕ್ಕೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಮೇ 7- ದೊಡ್ಡಬಳ್ಳಾಪುರದಿಂದ ಆಂಧ್ರದ ಅನಂತಪುರಕ್ಕೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನ ಚಕ್ರ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪೆಟ್ರೋಲ್‍ಬಂಕ್‍ವೊಂದಕ್ಕೆ ನುಗ್ಗಿದ ಘಟನೆ ಇಂದು ಬೆಳಗ್ಗೆ ಬಾಗೇಪಲ್ಲಿ ಪಟ್ಟಣ ಸಮೀಪ ನಡೆದಿದೆ.

ಘಟನೆಯಲ್ಲಿ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇಂದು ಮುಂಜಾನೆ ದೊಡ್ಡಬಳ್ಳಾಪುರದಿಂದ ಹೊರಟಿದ್ದ ಬಸ್ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಾಗೇಪಲ್ಲಿ ಪಟ್ಟಣಕ್ಕೆ ಬಂದಿತ್ತು.

ಸ್ವಲ್ಪ ಹೊತ್ತು ನಿಂತು ನಂತರ ಪ್ರಯಾಣ ಮುಂದುವರಿಸಿದಾಗ ಜೋರು ಶಬ್ದ ಬಂದಿದೆ. ಚಾಲಕ ಕುಬೇರಪ್ಪ ಸಮಯ ಪ್ರಜ್ಞೆ ಮೆರೆದು ತಕ್ಷಣ ವಾಹನ ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ.  ನಂತರ ಅದು ರಸ್ತೆ ಪಕ್ಕದಲ್ಲಿದ್ದ ಗಂಗೋತ್ರಿ ಪೆಟ್ರೋಲ್‍ಬಂಕ್‍ನೊಳಗೆ ನುಗ್ಗಿ ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದು ನಿಂತುಕೊಂಡಿದೆ.

ಈ ವೇಳೆ ಪ್ರಯಾಣಿಕರು ಆತಂಕಗೊಂಡು ಕಿರುಚಿಕೊಂಡಿದ್ದಾರೆ. ನಿರ್ವಾಹಕ ನವೀನ್‍ಕುಮಾರ್ ಅವರನ್ನು ಸಮಾಧಾನಪಡಿಸಿ ಧೈರ್ಯ ತುಂಬುವ ಪ್ರಯತ್ನ ನಡೆಸಿದ್ದಾರೆ. ಆದರೆ, ಬಸ್ ಗುದ್ದಿದ ರಭಸಕ್ಕೆ ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಈ ಘಟನೆ ನಡೆದಿದ್ದು, ಎದುರಿನಿಂದ ಅಥವಾ ಹಿಂದೆ ಯಾವುದೇ ವಾಹನಗಳು ಇಲ್ಲದಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಗಾಯಗೊಂಡಿದ್ದ ಪ್ರಯಾಣಿಕರನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಾಹನ ಒಮ್ಮೆಲೆ ಅಡ್ಡಾದಿಡ್ಡಿ ಚಲಿಸುವಂತಾಯಿತು. ಏನಾಯಿತೋ ಎಂದು ಗಾಬರಿಗೊಂಡು ನಾನು ಹೇಳಲು ಹೋದಾಗ ಸೀಟಿನ ಮುಂದಿದ್ದ ಕಂಬಿಗೆ ಹೊಡೆದುಕೊಂಡು ಗಾಯಗೊಂಡೆ. ಕೊನೆಗೂ ಜೀವ ಉಳಿಯಿತಲ್ಲಾ… ಎಂದು ಗಾಯಾಳುವೊಬ್ಬರು ಘಟನೆಯನ್ನು ವಿವರಿಸಿದ್ದಾರೆ.
ಬಾಗೇಪಲ್ಲಿ ಠಾಣೆ ಪೆÇಲೀಸರು ಸ್ಥಳಕ್ಕೆ ದಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin