ಬೈಕ್‍ಗೆ ಡಿಕ್ಕಿ ಹೊಡೆದ ಕೆಎಸ್ಆರ್‌ಟಿಸಿ ಬಸ್, ಪತಿ ಸಾವು, ಪತ್ನಿ ಬಚಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.9- ಅತಿ ವೇಗವಾಗಿ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ದಂಪತಿ ಪೈಕಿ ಪತಿ ಮೃತಪಟ್ಟು, ಪತ್ನಿ ಗಾಯಗಡಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ. ರಾಜಾಜಿನಗರದ ರಾಜ್‍ಕುಮಾರ್ ರಸ್ತೆಯ ಈ ಸಂಜೆ ಕಚೇರಿ ಬಳಿಯ ತಿರುವಿನಲ್ಲಿ ಅಪಘಾತ ನಡೆದಿದ್ದು, ಪ್ರಕಾಶ್‍ನಗರದ ನಿವಾಸಿ ಪ್ರಶಾಂತ್(32) ಎಂಬುವರು ಸಾವನ್ನಪ್ಪಿದ್ದಾರೆ.

ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಶೀಲಾ(30) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ತಮ್ಮ ಸ್ನೇಹಿತರ ಮನೆಯಿಂದ ವಾಪಸಾಗುತ್ತಿರುವಾಗ ತಡರಾತ್ರಿ 12.30ರ ಸುಮಾರಿನಲ್ಲಿ ಪ್ರಶಾಂತ್ ತಮ್ಮ ಪತ್ನಿಯೊಂದಿಗೆ ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನದಲ್ಲಿ ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ಬಂದು ಬಲಕ್ಕೆ ತಿರುಗುವಾಗ ನವರಂಗ್ ಕಡೆಯಿಂದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಘಟನೆಯಿಂದ ದಂಪತಿ ಕೆಳಗೆ ಬಿದ್ದು ಪ್ರಶಾಂತ್ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಇಎಸ್‍ಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಮೃತಪಟ್ಟಿದ್ದಾರೆ.  ಕೆಎಸ್ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ರಾಜಾಜಿನಗರ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments