ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್ : ಪವಾಡ ಸದೃಶ್ಯ ರೀತಿಯಲ್ಲಿ ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

KSRTC-Bus

ಕಡೂರು, ಮೇ 30- ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ 20 ಅಡಿ ಕಂದಕಕ್ಕೆ ಮಗುಚಿ ಬಿದ್ದು, 20 ಪ್ರಯಾಣಿಕರು ಗಾಯಗೊಂಡಿದ್ದಾರೆ. ನಿನ್ನೆ ಬೆಳಗ್ಗೆ ಸುಮಾರು 11.15ಕ್ಕೆ ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಪಟ್ಟಣಕ್ಕೆ ಸಮೀಪದ ವೇದಾನದಿ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆ ಗೋಡೆಗೆ ಡಿಕ್ಕಿ ಹೊಡೆದು ಸೇತುವೆಯಿಂದ ಕೆಳಗೆ ಬಿದ್ದಿದೆ.

ಘಟನೆಯಲ್ಲಿ ಚಾಲಕ ಗೋವಿಂದ, ನಿರ್ವಾಹಕ ಓಂಕಾರಸ್ವಾಮಿ ಸೇರಿ 15ಕ್ಕೂ ಹೆಚ್ಚು ಮಂದಿ ದುರಂತದಲ್ಲಿ ಗಾಯಗೊಂಡವರಾಗಿದ್ದಾರೆ. ಕಡೂರು ಸಾರ್ವಜನಿಕ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಗಾಯಾಳುಗಳನ್ನು ಸಾಗಿಸುವಲ್ಲಿ ಹೆಚ್ಚಿನ ಶ್ರಮವಹಿಸಿ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಇವರಲ್ಲಿ ಮೋಹನ್‍ರಾಯ್ ಎಂಬ ಎರಡೂವರೆ ವರ್ಷದ ಮಗು, ಜಯಲಕ್ಷ್ಮೀ(53) ಮತ್ತು ತಿಮ್ಮಯ್ಯ (54) ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ 22 ಮಂದಿ ಪ್ರಯಾಣಿಕರಿದ್ದರು. ಬಸ್ ತಂಗಲಿ ಸೇತುವೆ ಬಳಿ ಬಂದಾಗ ಭಾರೀ ಸದ್ದಿನಿಂದ ಕಬ್ಬಿಣದ ರಾಡು ಮುರಿದ ಅನುಭವವಾಯಿತು. ನಂತರ ಸ್ಟೇರಿಂಗ್ ನನ್ನ ಕೈತಪ್ಪಿ ಹೋಯಿತು. ಏನಾಗುತ್ತಿದೆ ಎನ್ನುವಷ್ಟರಲ್ಲಿ ಬಸ್ ಸೇತುವೆಯಿಂದ ಕೆಳಗುರುಳಿ ಬಿತ್ತು ಎಂದು ಚಾಲಕ ಗೋವಿಂದ ಪತ್ರಿಕೆಗೆ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸ್ಥಾನಿಕ ವೈದ್ಯ ಡಾ. ಉಮೇಶ್ ಮತ್ತು ಡಾ. ಶಿವು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡುವಲ್ಲಿ ಹರಸಾಹಸ ಪಟ್ಟರು.

ಘಟನೆ ವಿಷಯ ತಿಳಿದು ಆಸ್ಪತ್ರೆಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಸದಸ್ಯ ಮಹೇಶ್ ಒಡೆಯರ್, ಸಾರಿಗೆ ಸಂಸ್ಥೆಯ ಕಡೂರು ಘಟಕದ ವ್ಯವಸ್ಥಾಪಕ ಚನ್ನಬಸಪ್ಪ, ಪುರಸಭೆ ಮಾಜಿ ಸದಸ್ಯ ಚಿನ್ನರಾಜು ಭೇಟಿ ನೀಡಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.  ಜಿ.ಪಂ. ಸದಸ್ಯ ಕೆ.ಆರ್. ಮಹೇಶ್‍ಒಡೆಯರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಆರಕ್ಷಕ ಉಪ ನಿರೀಕ್ಷಕ ಸಿ. ರಾಕೇಶ್ ಮತ್ತು ಸಿಬ್ಬಂದಿ ಘಟನಾ ಸ್ಥಳದಲ್ಲಿ ನೋಡಲು ಬಂದ ಜನರನ್ನು ನಿಯಂತ್ರಿಸಿದ್ದಲ್ಲದೆ, ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಳಗೆಬಿದ್ದಿದ್ದ ಬಸ್‍ನ ಡೀಸೆಲ್ ಟ್ಯಾಂಕ್ ಸೋರುತ್ತಿದ್ದರಿಂದ ಅಗ್ನಿಶಾಮಕ ಠಾಣಾ ಸಿಬ್ಬಂದಿ ನೀರು ಸಿಂಪಡಿಸಿ ಯಾವುದೇ ಅಪಾಯವಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಂಡರು.

Facebook Comments

Sri Raghav

Admin