ಕೆಎಸ್ಆರ್‌ಟಿಸಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ವೃದ್ಧ ದಂಪತಿ ಸೇರಿ ನಾಲ್ವರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.4- ಕೆಎಸ್ಆರ್‌ಟಿಸಿಬಸ್ ಹಾಗೂ ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-206ರ ಮಲ್ಲಸಂದ್ರದ ಬಳಿ ಇಂದು ಬೆಳಗ್ಗೆ ನಡೆದಿದೆ.

ಗುಬ್ಬಿ ಕಡೆಯಿಂದ ತುಮಕೂರು ಕಡೆಗೆ ತೆರಳುತ್ತಿದ್ದ ಆಟೋ, ಬೆಂಗಳೂರು ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ವೃದ್ಧ ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮೃತಪಟ್ಟವರೆಲ್ಲರೂ ಗುಬ್ಬಿ ತಾಲೂಕಿನ ಮತ್ತಿಘಟ್ಟ ಹಾಗೂ ವಿವಿಧ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ. ಸ್ಥಳೀಯರು ಗಾಯಾಳುವನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಿಪಿಐ ಮಧುಸೂದನ್, ಎಸ್‍ಐ ಶ್ರೀನಿವಾಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಡಿವೈಎಸ್‍ಪಿ ತಿಪ್ಪೆಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಆರೋಗ್ಯವನ್ನು ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಶಾಸಕ ಜ್ಯೋತಿ ಗಣೇಶ್ ವಿಚಾರಿಸಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದರೆ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.

ಪ್ರತಿಭಟನೆ: ಮಲ್ಲಸಂದ್ರದ ಬಳಿ ಅಪಘಾತಗಳು ಸಂಭವಿಸುತ್ತಲೇ ಇವೆ. ಅಲ್ಲಿ ಹಂಪ್ ಹಾಕುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ರಸ್ತೆ ಕೂಡ ಕಿರಿದಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

Facebook Comments

Sri Raghav

Admin