ಗಣೇಶನ ಹಬ್ಬಕ್ಕೆ ಸಾರ್ವಜನಿಕರಿಗೆ ಶಾಕ್, ಮುಂದಿನ ವಾರವೇ ಬಸ್ ಪ್ರಯಾಣ ದರ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

D-C-Tammanna--01

ಮದ್ದೂರು, ಸೆ.9- ಗಣೇಶನ ಹಬ್ಬಕ್ಕೆ ಶಾಕ್ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸಲು ನಿರ್ಧಾರ ಮಾಡಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಮುಂದಿನ ವಾರದಿಂದ ಹೆಚ್ಚಳ ಮಾಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.28ರಷ್ಟು ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾವನೆ ಬಂದಿದ್ದು, ಈ ಬಗ್ಗೆ ಸರ್ಕಾರ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ಬಸ್ ಪ್ರಯಾಣ ದರ ಪರಿಷ್ಕರಣೆ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ನಿರಂತರವಾಗಿ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.  ಮೊದಲೇ ಹೆಚ್ಚಾಗಿರುವ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಹೆಚ್ಚಳವಾಗಿದ್ದು, ಇದರೊಂದಿಗೆ ರಾಜ್ಯ ಸರ್ಕಾರ ಬಡವರ ಜನಪ್ರಿಯ ಸಾರಿಗೆಯಾಗಿರುವ ಕೆಎಸ್‌ಆರ್ ಟಿಸಿ ಹಾಗೂ ಬಿಎಂಟಿಸಿಯು ಕೂಡ ತನ್ನ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಲು ಮುಂದಾಗಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಮಟ್ಟದಲ್ಲಿ ಕಿಸಿಗೆ ಭಾರವಾಗುವುದರಲ್ಲಿ ಸಂಶಯವಿಲ್ಲ. ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಮುಖ್ಯಸ್ಥರು ಸಾರಿಗೆ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಇವೆಲ್ಲದರ ನಡುವೆ ದಿನ ನಿತ್ಯ ಡಿಸೇಲ್ ದರದಲ್ಲಿ ಹೆಚ್ಚಾಗುತ್ತಿರುವುದರಿಂದ ನಾಲ್ಕು ನಿಗಮಗಳಿಗೆ ಹೆಚ್ಚಿನ ಮಟ್ಟದಲ್ಲಿ ನಷ್ಷ ಉಂಟಾಗುತ್ತಿರುವುದರಿಂದ ಸಹಜವಾಗಿ ನಷ್ಟದ ಹೊರೆಯನ್ನು ಜನಸಾಮಾನ್ಯರ ಮೇಲೆ ಸರ್ಕಾರ ವರ್ಗಾಯಿಸುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.

ಕಳೆದ ವಾರವೇ ಪ್ರಸ್ತಾವನೆ ಸಲ್ಲಿಕೆ :
ಕಳೆದ ವಾರವಷ್ಟೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು ಏರುತ್ತಿರುವ ಇಂಧನ ದರದಿಂದ ಟಿಕೆಟ್ ದರ ಹೆಚ್ಚಳ ಮಾಡದೆ ವಿಧಿಯೇ ಇಲ್ಲ. ಈಗಾಗಲೇ ಶೇ.18ರಷ್ಟು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡು, ಟಿಕೆಟ್ ದರ ಏರಿಕೆ ಮಾಡುತ್ತೇವೆ. ತೈಲ ದರ ಏರಿಕೆಯಿಂದ ನಿಗಮಕ್ಕೆ 3 ತಿಂಗಳಿಂದ 180 ಕೋಟಿ ನಷ್ಟವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin