ಸರ್ಕಾರಕ್ಕೆ 45 ದಿನದ ಡೆಡ್ ಲೈನ್ ನೀಡಿದ ಸಾರಿಗೆ ನೌಕರರು, ಮತ್ತೆ ಮುಷ್ಕರದ ಎಚ್ಚರಿಕೆ..!
ಬೆಂಗಳೂರು,ಫೆ.2- ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ, ಮತ್ತೊಂದು ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ನಲ್ಲಿ ನಡೆಸಿದ ಮುಷ್ಕರದ ಸಂದರ್ಭದಲ್ಲಿ ಮೂರು ತಿಂಗಳೊಳಗೆ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ 45 ದಿನವಾದರೂ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ.
ಉಳಿದ 45 ದಿನಗಳೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಹೋರಾಟಕ್ಕೆ ಇಳಿಯವುದು ಅನಿವಾರ್ಯ ವಾಗುತ್ತದೆ ಎಂದು ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು. ಮುಷ್ಕರ ಮುಗಿದು ಭರವಸೆ ನೀಡಿ 45 ದಿನ ಕಳೆದರೂ ಯಾವುದೇ ಬೇಡಿಕೆ ಈಡೇರಿಸದಿರುವುದರಿಂದ ನೌಕರರಲ್ಲಿ ಅನುಮಾನ ಮತ್ತು ಆತಂಕ ಮೂಡತೊಡಗಿದೆ.
ಇನ್ನು 45 ದಿನಗಳು ಕಾಲಾವಕಾಶವಿದೆ. ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದರು. ಸಾರಿಗೆ ಸಚಿವರು ಆರೋಗ್ಯ ವಿಮೆ ಯೋಜನೆ, ತರಬೇತಿ ಅವಧಿ ಒಂದು ವರ್ಷಕ್ಕೆ ಇಳಿಕೆ, ಬಾಟಾ ನೀಡುವುದು ಸೇರಿದಂತೆ ಮೂರು ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಆದರೆ ಅದಾವುದರ ಬಗ್ಗೆಯೂ ಸ್ಪಷ್ಟನೆ ಇಲ್ಲ. ವೇತನವನ್ನು ಕೂಡ ಅರ್ಧ ನೀಡಲಾಗುತ್ತಿದೆ.
ಮುಷ್ಕರದ ಸಮಯದಲ್ಲಿ ನೌಕರರ ಮೇಲೆ ದಾಖಲಿಸಿರುವ ಪೊಲೀಸ್ ದೂರುಗಳನ್ನು ಹಿಂಪಡೆಯಬೇಕು. ನೌಕರರ ಆಮಾನತು ಆದೇಶವನ್ನು ಹಿಂಪಡೆಯಬೇಕು, ಅವೈಜ್ಞಾನಿಕ ಪಾಳಿ ಪದ್ದತಿ ರದ್ದುಪಡಿಸಬೇಕು, ಅನುಚಿತವಾಗಿ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ, ಮಹಿಳಾ ಸಿಬ್ಬಂದಿಗಳು ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ಸೃಷ್ಟಿ ಮಾಡುವುದು, ಅರ್ಧ ವೇತನ ಮತ್ತು ತಡವಾಗಿ ನೀಡುವ ವೇತನವನ್ನು ಕೈಬಿಟ್ಟು ಸಮಯಕ್ಕೆ ಸರಿಯಾಗ ವೇತನ ನೀಡುವುದು ಹೀಗೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ.
ಸರ್ಕಾರವೇ ಭರವಸೆ ನೀಡಿದಂತೆ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮತ್ತೊಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಮಹಿಳಾ ಅಧ್ಯಕ್ಷರಾದ ಚಂಪಕಾವತಿ ಮುಂತಾದವರು ಇದ್ದರು.