ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯ್ತು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.5- ಪೀಣ್ಯದಲ್ಲಿರುವ ಶ್ರೀ ಬಸವೇಶ್ವರ ಬಸ್ ನಿಲ್ದಾಣವನ್ನು ಸಾರಿಗೆ ಇಲಾಖೆ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿದೆ.ಪ್ರಾಥಮಿಕ ಹಂತದಲ್ಲಿ 200 ಹಾಸಿಗೆಗಳ ಈ ಕೇಂದ್ರವನ್ನು ಇಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿದರು.

ನಾಳೆಯಿಂದ ಕೇಂದ್ರದಲ್ಲಿ ದಾಖಲಾತಿ ಆರಂಭಗೊಳ್ಳಲಿದೆ. ತುಮಕೂರು ಮಾರ್ಗವಾಗಿ ಬರುವ ಬಸ್‍ಗಳು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರುವುದರಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ತಪ್ಪಿಸಲು ಪಿಣ್ಯ ಬಳಿ ಬಸವೇಶ್ವರ ಬಸ್ ನಿಲ್ದಾಣ ಮತ್ತು ಬಹುಮಹಡಿಗಳ ಸಂಕೀರ್ಣವನ್ನು ನಿರ್ಮಿಸಲಾಗಿತ್ತು. ಆದರೆ ಇಲ್ಲಿಗೆ ಬಸ್‍ಗಳು ಹೆಚ್ಚು ಹೋಗದೆ ಇದ್ದಿದ್ದರಿಂದ ನಿಲ್ದಾಣ ಖಾಲಿ ಹೊಡೆಯುತ್ತಿತ್ತು.

ಖಾಲಿ ಬಸ್ ನಿಲ್ದಾಣವನ್ನು ಈಗ ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ರೋಟರಿ ಅಡ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದಲ್ಲಿ ಆರೈಕೆ ಕೇಂದ್ರ ನಿರ್ಮಿಸಲಾಗುತ್ತಿದೆ.

ನಾಗಸಂದ್ರದ ಪ್ರಕ್ರಿಯಾ ಆಸ್ಪತ್ರೆ ವೈದ್ಯಕೀಯ ಪಾಲುದಾರಿಕಾ ಸಂಸ್ಥೆಯಾಗಿ ಕೆಲಸ ಮಾಡಲಿದೆ. ಟೈಟಾನ್ ಸಂಸ್ಥೆ ಹಣಕಾಸಿನ ಪಾಲುದಾರನಾಗಿ ಕೆಲಸ ಮಾಡುತ್ತಿದ್ದು, ಕೋವಿಡ್ ಕೇಂದ್ರದಲ್ಲಿ ಅಗತ್ಯ ಇರುವ 10 ಐಸಿಯು ಬೆಡ್‍ಗಳನ್ನು ಒದಗಿಸುತ್ತಿದೆ.

ಆರೈಕೆ ಕೇಂದ್ರದಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಮೀಸಲಿರಿಸಲಾಗಿದೆ, ಸಾರಿಗೆ ನಿಗಮದ ಉದ್ಯೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಹಾರೈಕೆ ಕೇಂದ್ರಕ್ಕೆ ಪಾಲುದಾರರಾಗಿರುವ ರೋಟರಿ ಮತ್ತು ಟೈಟಾನ್ ಸಂಸ್ಥೆಗಳು ಶಿಫಾರಸ್ಸು ಮಾಡುವ ರೋಗಿಗಳಿಗೆ ಶೇ.10ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.

ಲಕ್ಷಣ ರಹಿತ ಮತ್ತು ಸೌಮ್ಯ ಪ್ರಕರಣಗಳ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ನಿಗದಿ ಪಡಿಸುವ ದರವನ್ನು ರೋಗಿಗಳು ಪಾವತಿಸಬೇಕಿದೆ. ಆಹಾರ, ಇತರ ಸೇವೆಗಳೊಂದಿಗೆ ವೈದ್ಯಕೀಯ ಸೇವೆಯನ್ನು ಒದಗಿಸಲಿದೆ.

ಶೌಚಾಲಯ, ಬಿಸಿ ನೀರಿನ ಸ್ನಾನದ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಲಿವೆ. ಎಲ್ಲಾ ರೋಗಿಗಳಿಗೂ ಪೌಷ್ಠಿಕ ಆಹಾರವನ್ನು ನೀಡಲಾಗುವುದು. ಆಂಬ್ಯುಲೆನ್ಸ್, ಆಕ್ಸಿಜನ್ ಸೌಲಭ್ಯ, ಸ್ವ್ಯಾಬ್ ಸಂಗ್ರಹ ಕೇಂದ್ರವನ್ನು ಸಹ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಿಬ್ಬಂದಿ ಮತ್ತು ವೈದ್ಯರುಗಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ. ಪಿಪಿಇ ಕಿಟ್ ಒದಗಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಪ್ರಕ್ರಿಯಾ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂದು ಉದ್ಘಾಟನಾ ಸಮಾರಂಭದಲ್ಲಿ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಹಿರಿಯ ಅಧಿಕಾರಿಗಳಾದ ಡಾ.ರಾಮ್ ನಿವಾಸ್ ಸಪಟ್, ಡಾ.ಕೆ.ಅರುಣ್, ಪ್ರಕ್ರಿಯ ಆಸ್ಪತ್ರೆಯ ಡಾ.ಶ್ರೀನಿವಾಸ ಚಿರುಕುರಿ, ರೋಟರಿಯ ನಾಗೇಂದ್ರ ಪ್ರಸಾದ್, ನಯೋನಿಕ ಕಣ್ಣು ಆಸ್ಪತ್ರೆಯ ಪ್ರಶಾಂತ್, ಟೈಟಾನ್ ಸಂಸ್ಥೆಯ ಶ್ರೀಧರ್ ಹಾಜರಿದ್ದರು.

Facebook Comments

Sri Raghav

Admin