ತಿರುಮಲ ತಿರುಪತಿ ದೇವಸ್ಥಾನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಕುಪೇಂದ್ರ ರೆಡ್ಡಿ ಅಧಿಕಾರ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.16- ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸಲಹಾ ಸಮಿತಿ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಶಾಸಕ ಎಸ್.ಆರ್.ವಿಶ್ವನಾಥ್ ಅಧಿಕಾರ ಸ್ವೀಕರಿಸಿದರು. ನಗರದ ವೈಯಾಲಿಕಾವಲ್‍ನಲ್ಲಿರುವ ಟಿಟಿಡಿ ದೇವಾಲಯದಲ್ಲಿ ತಿರುಪತಿ ದೇವಸ್ಥಾನದ ಮಂಡಳಿ ಅಧ್ಯಕ್ಷರಾದ ವೈ.ಎನ್.ಸುಬ್ಬಾರೆಡ್ಡಿ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿ ಸಮಿತಿಯ ಮೊದಲ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸುಬ್ಬಾರೆಡ್ಡಿ, ಬಾಲಾಜಿ ದರ್ಶನಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಬರುವ ಭಕ್ತರೇ ಹೆಚ್ಚಾಗಿದ್ದಾರೆ. ಭಕ್ತರಿಗೆ ಮೊದಲ ಆದ್ಯತೆ ಹಾಗೂ ಸಮಾನ ಅವಕಾಶ ಕಲ್ಪಿಸಲಾಗುವುದು. ಭಕ್ತರ ಸಮಸ್ಯೆ ಪರಿಹಾರಕ್ಕಾಗಿ ಸಲಹಾ ಸಮಿತಿಯನ್ನು ರಚಿಸಲಾಗಿದೆ. ತಿರುಮಲದಲ್ಲಿರುವ ಕರ್ನಾಟಕದ ಜಾಗದಲ್ಲಿ ಭವನ ನಿರ್ಮಾಣ ಮಾಡುವ ಸಂಬಂಧ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಅವಶ್ಯಕತೆ ಇರುವ ಕಡೆಗಳಲ್ಲಿ ಕಲ್ಯಾಣಮಂಟಪ ನಿರ್ಮಿಸುವ ಉದ್ದೇಶವಿದೆ ಎಂದರು.

ಕುಪೇಂದ್ರರೆಡ್ಡಿ ಮಾತನಾಡಿ, ಇದೇ ಮೊದಲ ಬಾರಿಗೆ ಕರ್ನಾಟಕದ ಐದು ಮಂದಿಯನ್ನು ಟಿಟಿಡಿ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಟಿಟಿಡಿ ದೇವಾಲಯ ಅಭಿವೃದ್ಧಿ ಮಾಡುವುದರ ಜತೆಗೆ ಹಿಂದೂ ಧರ್ಮದ ಪ್ರಚಾರ ಕೈಗೊಳ್ಳಲಾಗುವುದು. ತಿರುಪತಿಗೆ ಕರ್ನಾಟಕದಿಂದಲೇ ತೆರಳುವ ಭಕ್ತರೇ ಹೆಚ್ಚಾಗಿದ್ದಾರೆ. ಹೀಗಾಗಿ ಪೂಜೆ, ಪುನಸ್ಕಾರಗಳನ್ನು ರಾಜ್ಯದಲ್ಲೇ ಮಾಡಲು ಅನುಕೂಲ ಕಲ್ಪಿಸಲಾಗುವುದು. ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ದೇವಾಲಯ ನಿರ್ಮಿಸಿ ಹಾಗೂ ಕಲ್ಯಾಣೋತ್ಸವ ಮಾಡಬೇಕಾಗಿದೆ.

ಈಗಾಗಲೇ ರಾಜ್ಯದಲ್ಲಿ ಹಲವು ಕಡೆ ಕಲ್ಯಾಣೋತ್ಸವ ನಡೆಸಲಾಗುತ್ತಿದೆ. ಎಲ್ಲಾ ಕಡೆ ಇದನ್ನು ವಿಸ್ತರಣೆ ಮಾಡಬೇಕು ಎಂದರು. ಉಪಾಧ್ಯಕ್ಷ ವಿಶ್ವನಾಥ್ ಮಾತನಾಡಿ, ತಾವು ಶಾಸಕರಾಗಿರುವುದಕ್ಕಿಂತಲೂ ಟಿಟಿಡಿ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿರುವುದು ಹೆಚ್ಚು ಖುಷಿ ತಂದಿದೆ ಎಂದು ಹೇಳಿದರು.

Facebook Comments