ನೆಲ-ಜಲ ವಿಚಾರದಲ್ಲಿ ರಾಜಕೀಯ ಬೇಡ : ಕುಮಾರ ಬಂಗಾರಪ್ಪ
ಬೆಂಗಳೂರು, ಜ.19- ನಾಡಿನ ನೆಲ-ಜಲದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಶಾಸಕ ಕುಮಾರ ಬಂಗಾರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಒಂದಿಂಚೂ ಭೂಮಿ ಬಿಟ್ಟು ಕೊಡುವ ಮಾತಿಲ್ಲ. ಮಹಾರಾಷ್ಟ್ರ ಪದೇ ಪದೇ ಖ್ಯಾತೆ ತೆಗೆಯುತ್ತಲೇ ಬಂದಿದೆ. ಹಿಂದಿನಿಂದಲೂ ಇಂತಹ ಹೇಳಿಕೆಯನ್ನು ನೀಡುತ್ತಿದ್ದು. ಇದನ್ನು ತೀವ್ರವಾಗಿ ಖಂಡಿಸಬೇಕು ಎಂದರು.
ವರನಟ ಡಾ.ರಾಜ್ಕುಮಾರ್ ಅವರು ಕೂಡ ಹೋರಾಟ ಮಾಡಿದ್ದರು. ಈಗಲೂ ಎಲ್ಲಾ ಹೋರಾಟಗಾರರು ಒಗ್ಗೂಡಿ ದೊಡ್ಡ ಮಟ್ಟದ ಚಳವಳಿ ರೂಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ಮಹಾರಾಷ್ಟ್ರದ ಸಾಂಗ್ಲಿ-ಸೋಲ್ಲಾಪುರದಲ್ಲೂ ಕನ್ನಡಿಗರಿದ್ದಾರೆ. ಮಹಾರಾಷ್ಟ್ರದಂತೆ ನಾವು ಮಾತ ನಾಡಲು ಬರುವುದಿಲ್ಲ. ನಾವು ಕರ್ನಾಟಕದ ಗಡಿ ರಕ್ಷಣೆ ಬಗ್ಗೆ ಮಾತನಾಡಬೇಕೇ ಹೊರತು ಬೇರೆ ರೀತಿಯ ಹೇಳಿಕೆ ಕೊಡಬಾರದು ಎಂದರು.
ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಚಾತುರ್ಯ ನಡೆದಿದ್ದು , ಮುಂದಿನ ದಿನಗಳಲ್ಲಿ ಕನ್ನಡದ ನಿರ್ಲಕ್ಷ್ಯ ಆಗದಂತೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.