“ಆದಿಚುಂಚನಗಿರಿ ಶ್ರೀಗಳೇ ನನ್ನ ಮಾರ್ಗದರ್ಶಕರು, ಅವರನ್ನು ನಾನು ಅನುಮಾನಿಸಲು ಸಾಧ್ಯವೇ..?”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.29- ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನನಗೆ ಮಾರ್ಗದರ್ಶನ ಮಾಡಿದವರು. ಅವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಖಂಡಿತ ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನನಗೆ ನೈತಿಕ ಬಲವಾಗಿದ್ದವರು. ಅಲ್ಲದೆ, ತಮ್ಮ ಸಾಮಾಜಿಕ ಕಾರ್ಯಗಳ ನೆರಳಲ್ಲಿ ನನಗೆ ಮಾರ್ಗದರ್ಶನ ಮಾಡಿದವರು. ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರನಲ್ಲಿ ನನಗಾಗಿ ಪ್ರಾರ್ಥಿಸಿದವರು. ಅಂತಹವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಅಧಿಕಾರಾವಧಿಯಲ್ಲಿ ಆದಿಚುಂಚನಗಿರಿ ಶ್ರೀಗಳ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ವರದಿಗಳು, ಅದಕ್ಕೆ ಸಂಬಂಧಿಸಿದ ರಾಜಕೀಯ ನಾಯಕರ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾರದ ನೋವುಂಟು ಮಾಡಿವೆ. ಎಲ್ಲಕ್ಕೂ ಮಿಗಿಲಾಗಿ ಸ್ವಾಮೀಜಿಗಳಲ್ಲಿ ಮೂಡಿರಬಹುದಾದ ಬೇಸರ ನನ್ನ ನೋವನ್ನು ಹೆಚ್ಚಿಸಿದೆ ಎಂದು ಅವರು ನೊಂದು ನುಡಿದರು.

ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಸಂಭವಿಸದ ತಫೋದಕ್ಕೆ ಸಚಿವ ಅಶೋಕ್ ಅವರು ಎಲ್ಲದಕ್ಕಿಂತ ಮುಂದೆ ಹೋಗಿ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ. ಅವರ ಆತುರಕ್ಕೆ ಮರುಕವಿದೆ. ಅದೇ ಹೊತ್ತಲ್ಲೇ ಶ್ರೀಗಳಿಗೆ ಆಗುತ್ತಿರುವ ಬೇಸರಕ್ಕೆ ಅತೀವ ನೋವಿದೆ ಎಂದು ಕುಮಾರಸ್ವಾಮಿ ಟ್ವಿಟ್ಟರ್‍ನಲ್ಲಿ ತಿಳಿಸಿದ್ದಾರೆ.

Facebook Comments