ಪಕ್ಷಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದು ಸೂಕ್ತ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.13- ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದು ಸೂಕ್ತ ಎಂದರು. ಸಭಾಧ್ಯಕ್ಷರು ನೀಡಿದ ಶಾಸಕರ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಗೆ ಏನಾದರೂ ಸತ್ವವಿದೆಯೇ? ಅದರ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಎಚ್‍ಡಿಕೆ, ಈ ಕಾಯ್ದೆ ರದ್ದತಿಯ ಬಗ್ಗೆ ಸೂಕ್ತ ಚರ್ಚೆಯಾಗಬೇಕು. ಪಕ್ಷಾಂತರ ಕಾಯ್ದೆ ಇದೆ ಎಂದು ಭಯ ಮೂಡಿಸುವುದು ಏಕೆ? ಮುಕ್ತ ಅವಕಾಶ ಕೊಡಬಹುದಲ್ಲವೇ ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಿದರೆ ಹೆಚ್ಚು ಹೆಸರು ಪಡೆಯಬಹುದು. ಸಂಸತ್‍ನಲ್ಲಿ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯುವುದು ಸೂಕ್ತ ಎಂಬ ಸಲಹೆ ಮಾಡಿದರು. ಅನರ್ಹಗೊಂಡಿದ್ದ ಶಾಸಕರು ಎರಡು ತಿಂಗಳು ಪಟ್ಟ ಯಾತನೆ ಮತ್ತೆ ಯಾರಿಗೂ ಬರುವುದು ಬೇಡ ಎಂದು ಹೇಳಿದರು.

ಸಿದ್ದರಾಮಯ್ಯನವರಿಂದಲೇ ಬಿಜೆಪಿಗೆ ಶಕ್ತಿತುಂಬುವ ಕೆಲಸ : ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಅಪನಂಬಿಕೆಯನ್ನು ಜನರಲ್ಲಿ ಮೂಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ. ಆದರೆ ಇಂತಹ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಯಾವ ಸಾಧನೆ ಮಾಡಿದೆ ಎಂದು ಒಳ ಒಪ್ಪಂದ ಮಾಡಿಕೊಳ್ಳಲಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನ್ನು ಬಿ ಟೀಂ ಎಂದು ಟೀಕಿಸುವ ಮೂಲಕ ಬಿಜೆಪಿ 105 ಸ್ಥಾನಗಳನ್ನು ಪಡೆಯುವಂತೆ ಮಾಡಿದರು ಎಂದು ಆಪಾದಿಸಿದರು.

ಕಾಂಗ್ರೆಸ್ ಸರ್ಕಾರದ ಸಾಧನೆಯ ಮೇಲೆ ಉಪಚುನಾವಣೆಯನ್ನು ಎದುರಿಸಲಿ. ಸಚಿವ ಸಿ.ಟಿ.ರವಿ ಹೇಳಿದ್ದಾರೆ ಕಾಂಗ್ರೆಸ್‍ನ ಶೇ.50ರಷ್ಟು ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದಾರೆ ಎಂದು. ಚುನಾವಣೆ ಫಲಿತಾಂಶದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾದ ಮನೆಗಳ ನಿರ್ಮಾಣಕ್ಕೆ 29 ಸಾವಿರ ಕೋಟಿ ರೂ. ಬೇಕು. ಹಾಗೆಯೇ ನೀರಾವರಿ ಯೋಜನೆಗಳಿಗೂ ಸಾಕಷ್ಟು ಹಣ ಬೇಕಿದ್ದು, ಇವೆರಡೂ ಇಲಾಖೆಗಳ ಯೋಜನೆ ಪೂರ್ಣಗೊಳ್ಳಲು ಇನ್ನು 10 ವರ್ಷಗಳು ಬೇಕಾಗಿದೆ ಎಂದು ವ್ಯಂಗ್ಯವಾಡಿದರು.

Facebook Comments