ಫ್ಯಾಮಿಲಿ ಜೊತೆ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.16-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೋವಾದ ಖಾಸಗಿ ಹೊಟೇಲ್‍ನಲ್ಲಿ ಇಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಶಾಸಕಿ ಹಾಗೂ ತಮ್ಮ ಪತ್ನಿ ಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಕೇಕ್ ಕತ್ತರಿಸಿ ಇಂದು ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಶುಕ್ರವಾರ ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಷಷ್ಠ್ಯಾಬ್ಧಿ ಪೂಜೆಯನ್ನು ನೆರವೇರಿಸಿದ್ದರು. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವ ಕುಮಾರಸ್ವಾಮಿ ಶನಿವಾರವೇ ಕುಟುಂಬ ಸದಸ್ಯರೊಂದಿಗೆ ಗೋವಾಕ್ಕೆ ತೆರಳಿದ್ದರು. ನಾಳೆ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್ಸಾಗುವ ಕಾರ್ಯಕ್ರಮವಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಹಣ್ಣು-ಹಂಪಲು ವಿತರಣೆ: ಕುಮಾರಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಗರದ ವಿವಿಧೆಡೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು-ಹಂಪಲು, ಹೊದಿಕೆ ವಿತರಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಉದ್ಯಾನವನಗಳಲ್ಲಿ ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಪಕ್ಷದ ಮುಖಂಡರಾದ ಡಾ.ಗಿರೀಶ್ ಕೆ.ನಾಶಿ, ಡಾ.ಸಿ.ರಾಜಣ್ಣ, ಮಾಜಿ ಉಪಮೇಯರ್ ಭದ್ರೇಗೌಡ ಮೊದಲಾದ ನೇತೃತ್ವದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಾಗೂ ಹೊದಿಕೆಗಳನ್ನು ವಿತರಿಸಲಾಯಿತು ಎಂದು ಆರ್.ಪ್ರಕಾಶ್ ತಿಳಿಸಿದರು.

ಇದೇ ರೀತಿ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಹಣ್ಣು, ಹೊದಿಕೆ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

Facebook Comments