ಬಿಜೆಪಿ ನಾಯಕರ ಟೀಕೆಗೆ ಕುಮಾರಸ್ವಾಮಿ ಕಿಡಿ
ಬೆಂಗಳೂರು,ಜ.22- ರೈತರ ಸಾಲ ಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆಯಂತಹ ಕಾರ್ಯಕ್ರಮಗಳು ದೇಶವಿರೋಧಿಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಅವರು, ನಿಮ್ಮ ಸರ್ಕಾರ ಜಾರಿಗೆ ತಂದಿರುವ ದೇಶ ಭಕ್ತಿ ಕಾರ್ಯಕ್ರಮಗಳನ್ನು ತೋರಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬಡವ, ಬಲ್ಲಿದರು ಬೇಕಿಲ್ಲದ ನಿಮಗೆ ಕೋಮು ಭಾವನೆಗಳೇ ಬಂಡವಾಳ. ನಿಮ್ಮಂತಹ ದೇಶಪ್ರೇಮ ನಮಗೆ ಬೇಕಿಲ್ಲ ಎಂದು ಟೀಕಿಸಿದ್ದಾರೆ. ನನ್ನನ್ನು ದೇಶ ದ್ರೋಹಿ, ಪಾಕಿಸ್ತಾನ ಪರ ವಾದಿ ಎಂದು ಹೇಳಿರುವ ನೀವು, ದಿನಬೆಳಗಾದರೆ ಪಾಕಿಸ್ತಾನವನ್ನೇ ಜಪಿಸುತ್ತಿದ್ದಿರಿ. ನೀವು ದೇಶ ಭ್ರಷ್ಟರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಉದ್ದೇಶಿಸಿ ಟ್ವಿಟ್ ಮಾಡಿದ್ದಾರೆ.
ನಾನು ಈ ಮಣ್ಣಿನವ ಎಂದು ಟ್ವಿಟ್ ಮಾಡಿರುವ ಕುಮಾರ್ಸ್ವಾಮಿ, ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದಕರು ದೇಶ ದ್ರೋಹಿಗಳಲ್ಲವೆ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಸಾಲು ಮರಗಳನ್ನು ಬೆಳೆಸಿದ ತಿಮ್ಮಕ್ಕ, ಕೆರೆ-ಕಟ್ಟೆ ಕಟ್ಟಿದ ಕಾಮೇಗೌಡ ನಿಮಗೆ ದೇಶ ಪ್ರೇಮಿಯಾಗಲಿಲ್ಲ. ರಾಜಕೀಯಕ್ಕಾಗಿ ಧರ್ಮಗಳನ್ನು ಬಳಸಿಕೊಳ್ಳುವ, ಕೋಮು ದಳ್ಳುರಿ ಹುರಿಸುವವರಲ್ಲಿ ದೇಶ ಪ್ರೇಮ ಕಂಡ ನೀವು ನಿಮ್ಮಲ್ಲಿರುವ ಮಾನಸಿಕ ಭ್ರಷ್ಟಾಚಾರಿಯನ್ನು ಸಮಾಜದ ಎದುರು ಅನಾವರಣ ಮಾಡಿದ್ದೀರಿ ಎಂದು ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವಿಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.