ಪುತ್ರನ ವಿವಾಹಕ್ಕೆ ಪ್ರಧಾನಿಗೆ ಆಹ್ವಾನ ನೀಡ್ತಾರಂತೆ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರೂ,ಫೆ.25- ರಾಜ್ಯ ಯುವ ಜನತಾದಳದ ಅಧ್ಯಕ್ಷ, ನಟ ನಿಖಿಲ್‍ಕುಮಾರಸ್ವಾಮಿ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ಗಣ್ಯರನ್ನು ಆಹ್ವಾನಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.  ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.17ರಂದು ನನ್ನ ಮಗನ ಮದುವೆ ನಡೆಯಲಿದೆ. ರಾಮನಗರದಲ್ಲಿ ಮದುವೆಗೆ ಬೇಕಾದ ಅಗತ್ಯ ಸಿದ್ದತೆಗಳನ್ನು ಮಾಡಲಾಗುತ್ತಿದೆ.

ಇನ್ನು ಕೂಡ ಲಗ್ನಪತ್ರಿಕೆಯನ್ನು ವಿತರಿಸುವ ಕಾರ್ಯ ಇನ್ನು ಪ್ರಾರಂಭ ಮಾಡಿಲ್ಲ. ಎಲ್ಲ ಗಣ್ಯರನ್ನು ಮದುವೆಗೆ ಆಹ್ವಾನಿಸುತ್ತೇವೆ. ಸಾಧ್ಯವಾದರೆ ಪ್ರಧಾನಿಯವರನ್ನೂ ಕೂಡ ಎಂದು ಹೇಳಿದರು.  ರಾಜ್ಯ ಸರ್ಕಾರದ ಬಗ್ಗೆ ಏನು ಮಾತನಾಡುವುದಿಲ್ಲ. ಏಕೆಂದರೆ ಮಾತನಾಡುವಂತಹ ಕೆಲಸಗಳನ್ನು ಈ ಸರ್ಕಾರ ಮಾಡುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರು ತಿಂಗಳು ಸಮಯ ಅವಕಾಶ ಕೇಳಿದ್ದಾರೆ. ಅಲ್ಲದೆ ಆರು ತಿಂಗಳ ನಂತರ ಜನ ಬಡಿಗೆಯಿಂದ ವಿರೋಧ ಪಕ್ಷಕ್ಕೆ ಹೊಡೆಯುತ್ತಾರೆ ಎಂದು ಹೇಳಿದ್ದಾರೆ. ಸಮಯ ಕೊಟ್ಟು ನೋಡೋಣ ಏನು ಸಾಧನೆ ಮಾಡುತ್ತಾರೆ ಕಾದುನೋಡೋಣ ಎಂದು ವ್ಯಂಗ್ಯವಾಡಿದರು.

ಪ್ರಶಾಂತ್ ಕಿಶೋರ್ ಜೊತೆ ಮಾತುಕತೆ: ಮುಂಬರುವ ವಿಧಾನಸಭೆ ಚುನಾವಣೆಗೆ ಚುನಾವಣಾ ತಂತ್ರಗಾರಿಕೆ ರೂಪಿಸುವ ಸಂಬಂಧ ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಅವರೊಂದಿಗೆ ಪ್ರಾಥಮಿಕ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಅವರಿಂದ ಸಲಹೆ ಪಡೆಯುವ ನಿರ್ಧಾರ ಮಾಡಲಾಗುವುದು ಎಂದರು.

ವಿಧಾನಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಚರ್ಚೆ ಸಂದರ್ಭದಲ್ಲಿ ಯಾವ ದಿಕ್ಕಿನಲ್ಲಿ ಸಾಗುತ್ತದೆಯೋ ನೋಡೋಣ. ಯಾವ ವಿಷಯದ ಆಧಾರದ ಮೇಲೆ ಚರ್ಚೆ ಮಾಡುತ್ತಾರೆ ಕಾದುನೋಡೋಣ ಎಂದು ಹೇಳಿದರು.  ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಶಿಕ್ಷಣ ಎಂಬುದು ಅಮೂಲ್ಯವಾದ ಅಸ್ತ್ರವಾಗಿದ್ದು, ಅದರಿಂದ ಏನಾದರೂ ಸಾಧಿಸಬಹುದಾಗಿದೆ ಎಂದರು.

ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕಿನ ಗುರಿ ಇಟ್ಟುಕೊಳ್ಳಬೇಕು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ತಾವು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ಬಡವರ ಮಕ್ಕಳು ಉಚಿತವಾಗಿ ಇಂಗ್ಲಿಷ್ ಕಲಿಯಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭ ಮಾಡಲಾಗಿತ್ತು.

ಈ ಸರ್ಕಾರ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಸಿಎಂಎ ಅಧ್ಯಕ್ಷ ಜಿಯಾವುಲ್ಲಾ ಸಹೀದ್ ಸಾಹೇಬ್, ಸಿಎಂಎ ಉಪಾಧ್ಯಕ್ಷ ಜನಾಬ್ ಅಖ್ತರ್ ಸಹೀಬ್, ಮೃತುಜ ಹುಸೇನ್, ಪ್ರಧಾನ ಕಾರ್ಯದರ್ಶಿ ಡಾ.ಜಹೀರ್‍ಉದ್ದೀನ್ ಅಹಮ್ಮದ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments