ಪ್ರವಾಹಪೀಡಿತ ಉತ್ತರ ಕರ್ನಾಟಕಕ್ಕೆ ಅಕ್ಕಿ, ಬೇಳೆ, ಬಟ್ಟೆಯ ನೆರವು : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.19- ಪ್ರವಾಹಪೀಡಿತ ಗುಲ್ಬರ್ಗಾ ಜಿಲ್ಲೆಯ ಸಂಕಷ್ಟದಲ್ಲಿರುವ ಜನರಿಗೆ ಅಕ್ಕಿ, ಬೇಳೆ, ಬಟ್ಟೆ ಹಾಗೂ ಹೊದಿಕೆಯನ್ನು ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಮುಖಂಡರಿಂದ ಅಲ್ಲಿನ ಪರಿಸ್ಥಿತಿಯ ಮಾಹಿತಿಯನ್ನು ಪಡೆದಿದ್ದು, ಬುಧವಾರ ಬೆಳಗ್ಗೆಯೊಳಗೆ ಐದಾರು ಲಾರಿಯಲ್ಲಿ ಅಕ್ಕಿ, ಬೇಳೆ ಹಾಗೂ ಹೊದಿಕೆಗಳನ್ನು ಕಳುಹಿಸಿಕೊಡಲಾಗುವುದು.

ಅಕ್ರಮವಾಗಿ ಸಂಪಾದಿಸಿದ ಹಣದಿಂದ ಇದನ್ನು ಕೊಡುತ್ತಿಲ್ಲ. ಕಾರ್ಯಕರ್ತರು ಮಾಡಿದ ಸಹಾಯದಿಂದ ಇದನ್ನು ಕೊಡುತ್ತಿದ್ದೇನೆ. ಪಕ್ಷದ ವತಿಯಿಂದ ಎಂಟುಹತ್ತು ಸಾವಿರ ಕುಟುಂಬಗಳಿಗೆ ನೆರವಾಗಬೇಕು ಎಂಬ ಉದ್ದೇಶವಿದೆ.  ಉತ್ತರ ಕರ್ನಾಟಕದ ಜನ ತಮ್ಮನ್ನು ಕೈಬಿಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಮತಗಳಿಕೆಗಾಗಿ ಇದನ್ನು ಮಾಡುತ್ತಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಉದ್ದೇಶದಿಂದ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕನಿಷ್ಟ ಸೌಜನ್ಯವೂ ಇಲ್ಲ. ಮಕ್ಕಳು ಬಿಸ್ಕೆಟ್‍ಗಾಗಿ ಗೋಗರಿಯುತ್ತಿದ್ದನ್ನು ಮಾಧ್ಯಮಗಳ ಮೂಲಕ ಗಮನಿಸಿ ಈ ತೀರ್ಮಾನ ಕೈಗೊಂಡಿದ್ದೇವೆ. ಎಲ್ಲ ಬೆಳೆಗಳು ನಾಶವಾಗಿವೆ. ಪ್ರವಾಹ ಪೀಡಿತರ ಸಂಕಷ್ಟಕ್ಕಿಂತ ಸರ್ಕಾರಕ್ಕೆ ಚುನಾವಣೆಯೇ ಮುಖ್ಯವಾಗಿದೆ ಎಂದು ಆರೋಪಿಸಿದರು.

ಪಕ್ಷ ಬಿಡೊಲ್ಲ:  ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯಕ್ ಪಕ್ಷ ಬಿಡುವುದಿಲ್ಲ. ಆದರೆ ಮತ್ತೊಬ್ಬ ಮಾಜಿ ಶಾಸಕ ಮಧುಬಂಗಾರಪ್ಪನವರ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಿ. ಲೋಕಸಭೆ ಚುನಾವಣೆ ನಂತರ ತಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಜಾತಿಗಣತಿ ಬಗ್ಗೆ ನಾನು ಅಡ್ಡಿಯಾಗಿದ್ದೇನೆ ಎಂದು ಆರೋಪಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬತ್ತಳಿಕೆ ಖಾಲಿಯಾಗಿದ್ದು, ಜನರನ್ನು ಮರಳು ಮಾಡಲು ಈ ಅಸ್ತ್ರ ಬಳಸುತ್ತಿದ್ದಾರೆ ಎಂದು ಟೀಕಿಸಿದರು.  ಮೈತ್ರಿ ಸರ್ಕಾರದ ಅವಧಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಈ ಬಗ್ಗೆ ಯಾವಾಗಾದರೂ ಪ್ರಸ್ತಾಪ ಮಾಡಿದ್ದರೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸಚಿವರು ಸಂಪುಟ ಸಭೆಯಲ್ಲಾದರೂ ಈ ವಿಚಾರ ಪ್ರಸ್ತಾಪಿಸಿದ್ದರೇ ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರದಲ್ಲಿ ನಾನು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ವಿರುದ್ಧವಿದ್ದರೆ ಅವತ್ತೆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಬೇಕಿತ್ತು ಎಂದರು.  ಜೆಡಿಎಸ್ ಮುಗಿಸಬೇಕೆಂಬುದೇ ಅವರ ಕನವರಿಕೆಯಾಗಿದೆ. ಬಿಜೆಪಿ ಕಾಣುವುದಿಲ್ಲ. ಈಗ ಹಿಂದುಳಿದ ವರ್ಗದ ನೆನಪಾಗಿದೆ. ಜೆಡಿಎಸ್ ಬೆಳವಣಿಗೆ ಸಹಿಸಲಾಗುತ್ತಿಲ್ಲ. ಜನತೆ ಜಾತಿಬೇಧ ಮರೆತು ಮತ್ತೊಮ್ಮೆ ತಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Facebook Comments