ಸಾಲಮನ್ನಾ ಹಣ ಬಿಡುಗಡೆ ಮಾಡದ ಬಿಜೆಪಿ ಸರ್ಕಾರ : ಎಚ್‍ಡಿಕೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಅ.3- ಕಳೆದ 14ತಿಂಗಳಲ್ಲಿ ಇಪ್ಪತ್ತೈದು ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇ ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲಮನ್ನಾ ಹಣ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಕಳ್ಳಂಬೆಳ್ಳ ಹೋಬಳಿಯ ಹಾಲೇನಹಳ್ಳಿ, ಬಾಲೇನಹಳ್ಳಿ, ತರೂರು, ಭೂಪಸಂದ್ರ, ದೊಡ್ಡ ಆಲದಮರ ಸೇರಿದಂತೆ ವಿವಿಧೆಡೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

ಸಿರಾ ತಾಲ್ಲೂಕು ಒಂದರಲ್ಲಿ ಹದಿನೇಳು ಸಾವಿರ ರೈತರು ಸಾಲಮನ್ನಾ ಪ್ರಯೋಜನ ಪಡೆದಿದ್ದಾರೆ, 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೊದಲೂರು ಕೆರೆಗೆ ನೀರು ಹರಿಸಲು 600 ಕೋಟಿ ಬಿಡುಗಡೆ ಮಾಡಿದ್ದೇ, ಈಗ ಬಿಜೆಪಿಯವರು ಮೊದಲೂರು ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದರು.

ಸತ್ಯಣ್ಣ ಶಾಸಕರಾದ ಮೇಲೆ ಸುಮಾರು ಹದಿನೇಳು ಸಾವಿರ ರೈತರಿಗೆ ಬಗರ್ ಹುಕುಂ ಜಮೀನು ಮಂಜೂರು ಪತ್ರ ನೀಡಿದರು, ಬಿಜೆಪಿ ಅಧಿಕಾರ ನಡೆಸುತ್ತಿದೆ, ಉತ್ತರ ಕರ್ನಾಟಕದಲ್ಲಿ ನೆರೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ ಅವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸದರು. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಸಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಅನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ, ಪಕ್ಷಕ್ಕೆ ನಿಷ್ಠರಾಗಿದ್ದ ಸತ್ಯಣ್ಣ ಅವರ ನೈತಿಕತೆಯನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಪಕ್ಷದಲ್ಲಿ ಅಧಿಕಾರ ಅನುಭವಿಸಿದ ಹಲವರು ನಮ್ಮನ್ನು ಬಿಟ್ಟು ಹೋಗಿದ್ದಾರೆ, ಯಾರೇ ಹೋದರು ಪಕ್ಷದಲ್ಲಿ ಬಲಿಷ್ಠ ಕಾರ್ಯಕರ್ತರ ಪಡೆ ಇದೆ, ಅಮ್ಮಾಜಮ್ಮ ಅವರನ್ನು ಗೆಲ್ಲಿಸುವ ಮೂಲಕ ಸಿರಾ ಜೆಡಿಎಸ್ ಭದ್ರಕೋಟೆ ಎನ್ನುವುದನ್ನು ನಿರೂಪಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯ ಇತಿಹಾಸದಲ್ಲಿ ಸಿರಾ ಉಪ ಚುನಾವಣೆ ಮೈಲಿಗಲ್ಲು ಆಗಬೇಕಿದೆ, ಕೆ.ಆರ್.ಪೇಟೆ ಮಾದರಿಯಲ್ಲಿ ಹಣ ಹಂಚಿ ಚುನಾವಣೆ ಗೆಲ್ಲಲ್ಲು ಬಂದಿರುವ ಬಿಜೆಪಿಗೆ ಸಿರಾದ ಸ್ವಾಭಿಮಾನಿ ಮತದಾರರು ತಕ್ಕ ಪಾಠವನ್ನು ಕಲಿಸಬೇಕಿದೆ, ಅಮ್ಮಾಜಮ್ಮ ಅವರಿಗೆ ಮತ ನೀಡುವ ಮೂಲಕ ಅವರ ಗೆಲ್ಲಿಸುವ ಉತ್ಸಾಹವನ್ನು ಯುವಕರು, ಮಹಿಳೆಯರು ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Facebook Comments