ಸರ್ಕಾರ ಪ್ರತಿಷ್ಠೆ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು : ಎಚ್ಕೆಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ರಾಜ್ಯ ಸರ್ಕಾರ ಪ್ರತಿಷ್ಠೆ ಬಿಟ್ಟು ಸಾರಿಗೆ ನೌಕರರ ಮನವೊಲಿಸಿ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು. ಸಾರಿಗೆ ಸಂಸ್ಥೆಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಇಂದಿನಿಂದ ಆರಂಭಿಸಿದ್ದಾರೆ. ಇದರಿಂದ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಸಾಮಾನ್ಯ ಜನರು, ಕೂಲಿ ಕಾರ್ಮಿಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸುವುದು ಸೂಕ್ತ ಎಂದು ಈ ಸಂಜೆಗೆ ತಿಳಿಸಿದರು.

ಸಾರಿಗೆ ನೌಕರರ ಮುಖಂಡರೊಂದಿಗೆ ತಕ್ಷಣವೇ ಮಾತುಕತೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಬೇಕು. ಆರನೆ ವೇತನ ಆಯೋಗದ ಶಿಫಾರಸು ಜಾರಿಗಾಗಿ ನೌಕರರು ಪಟ್ಟು ಹಿಡಿದು ಮುಷ್ಕರ ಆರಂಭಿಸಿದ್ದಾರೆ. ಈಗಾಗಲೇ ಸರ್ಕಾರಿ ನೌಕರರಿಗೆ ಆರನೆ ವೇತನ ಶಿಫಾರಸನ್ನು ಜಾರಿ ಮಾಡಲಾಗಿದೆ. ಹೀಗಾಗಿ ಸಾರಿಗೆ ನೌಕರರಿಗೂ ಕೊಡಬೇಕಲ್ಲವೆ ಎಂದರು.

ಸಾರಿಗೆ ನೌಕರರು ಕೂಡ ಪ್ರಯಾಣಿಕರ ಹಿತದೃಷ್ಟಿಯಿಂದ ರಾಜಿ ಮಾಡಿಕೊಳ್ಳುವುದು ಒಳ್ಳೆಯದು. ಶರತ್ತಿಗೆ ಒಳಪಟ್ಟು ಅವರು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಜನಸಾಮಾನ್ಯರ ದೈನಂದಿನ ಬಸ್ ಸಮಸ್ಯೆಯನ್ನು ಪರಿಹರಿಸುವುದು ಸೂಕ್ತ. ಇದೇ ರೀತಿ ಬಿಕ್ಕಟ್ಟು ಬಗೆಹರಿಯದೆ ಮುಷ್ಕರ ಮುಂದುವರಿದರೆ ಶಾಲಾ-ಕಾಲೇಜುಗಳ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.

ದೈನಂದಿನ ಕೆಲಸ-ಕಾರ್ಯಗಳಿಗೆ ಹೋಗುವವರಿಗೂ ತುಂಬ ತೊಂದರೆಯಾಗಿದೆ. ಅಲ್ಲದೆ ಪ್ರಯಾಣಿಕರು ಕೂಡ ಪರದಾಡುವ ಪರಿಸ್ಥಿತಿ ಇದೆ. ವಾಸ್ತವ ಪರಿಸ್ಥಿತಿ ಅರಿತು ಸರ್ಕಾರ ಮತ್ತು ನೌಕರರು ಶೀಘ್ರ ಬಿಕ್ಕಟ್ಟನ್ನು ಪರಿಹರಿಸಿಕೊಂಡು ಬಸ್ ಸಂಚಾರವನ್ನು ಯಥಾರೀತಿ ಆರಂಭಿಸಬೇಕು ಎಂದು ಅವರು ಹೇಳಿದರು.

Facebook Comments