ರೈತರ ಬೆಳೆಗಳ ಇಳುವರಿ ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲೂ ತಿಳುವಳಿಕೆ ಕೇಂದ್ರ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೀದರ್,ಜೂ.28- ಸರ್ಕಾರದ ವತಿಯಿಂದ ಕೃಷಿ ಪದ್ಧತಿ ಬದಲಾವಣೆ ಬಗ್ಗೆ ರೈತರಿಗೆ ತಿಳುವಳಿಕೆ ನೀಡುವ ಹಾಗೂ ಅವರ ಆದಾಯ ಹೆಚಳಕ್ಕೆ ಸಂಬಂಧಿಸಿದ ಪೈಲೆಟ್ ಪ್ರಾಜೆಕ್ಟ್‍ನ್ನು ಪ್ರತಿ ಜಿಲ್ಲೆಯಲ್ಲೂ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ವಿಜಳಂಬ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮುಗಿಸಿ ಬೆಂಗಳೂರಿಗೆ ಮರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ಜಿಲ್ಲೆಗಳ ತಲಾ ಒಂದೊಂದು ಗ್ರಾಮದಲ್ಲಿ ಕೃಷಿ ಪದ್ಧತಿ ಬದಲಾವಣೆ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು.

100 ಮಂದಿ ರೈತರು ಸಹಕಾರ ಸಂಘವನ್ನು ರಚಿಸಿಕೊಂಡರೆ ಆ ಸಂಘಕ್ಕೆ ಒಂದು ಕೋಟಿ ರೂ. ಸರ್ಕಾರ ಸಹಾಯಧನ ನೀಡಲಿದೆ ಎಂದರು. ಮಹಾರಾಷ್ಟ್ರದಲ್ಲಿ ಅಲ್ಲಿನ ರೈತರೇ ಕೃಷಿ ಪದ್ಧತಿಯಲ್ಲಿ ಬದಲಾವಣೆ ತಂದು ಬರಗಾಲದಲ್ಲೂ ಉತ್ತಮ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ವಾರ್ಷಿಕ ಆದಾಯ 40 ಲಕ್ಷದಿಂದ 70 ಕೋಟಿಗೆ ಹೆಚ್ಚಳವಾಗಿದೆ. ಅದರ ಸಾಕ್ಷ್ಯಚಿತ್ರವನ್ನು ರೈತರಿಗೆ ಪ್ರದರ್ಶಿಸಲಾಗುತ್ತಿದೆ.

ಇಂಥ ವಾತಾವರಣ ಹಳ್ಳಿಯಲ್ಲಿ ನಿರ್ಮಾಣ ಮಾಡಿದರೆ ಸರ್ಕಾರಿ ಉದ್ಯೋಗದ ಅಗತ್ಯ ಯುವಕರಿಗೆ ಇರುವುದಿಲ್ಲ. ಒಂದೇ ರಾತ್ರಿಯಲ್ಲಿ ಎಲ್ಲ ಬದಲಾವಣೆಗಳನ್ನುಮಾಡಲು ಸಾಧ್ಯವಿಲ್ಲ ಎಂಬುದು ನಮಗೂ ಅರಿವಿದೆ ಎಂದರು.

ಗ್ರಾಮವಾಸ್ತವ್ಯ ಹೊರತುಪಡಿಸಿ ಹಲವು ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕೃಷಿ ಪದ್ದತಿ ಬದಲಾವಣೆ ಬಗ್ಗೆ ಮಾಹಿತಿ ನೀಡಲಾಗುವುದು. ಇಸ್ರೇಲ್ ಕೃಷಿ ಪದ್ಧತಿಗೆ 450 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದರು.

ಜೆಡಿಎಸ್‍ಗೆ ಸೀಮಿತವಲ್ಲ:
ತಾವು ನಡೆಸುತ್ತಿರುವ ಗ್ರಾಮವಾಸ್ತವ್ಯ ಕೇವಲ ಜೆಡಿಎಸ್‍ಗೆ ಸೀಮಿತವಲ್ಲ. ಇದು ಸರ್ಕಾರದ ಕಾರ್ಯಕ್ರಮ. ನಿನ್ನೆ ನಡೆದಂತಹ ಜನತಾದರ್ಶನ ಕಾರ್ಯಕ್ರಮದಲ್ಲಿ ಉಭಯ ಪಕ್ಷಗಳ ಸಚಿವರು, ಶಾಸಕರು ಹಾಗೂ ಮುಖಂಡರು ಪಾಲ್ಗೊಂಡಿದ್ದರು. ಜಿಲ್ಲಾಡಳಿತ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದರು ಎಂದರು.
ಟೀಕೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ.

ಹೀಗಾಗಿ ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂಬ ಕವಿವಾಣಿಯಂತೆ ಗ್ರಾಮವಾಸ್ತವ್ಯ ಟೀಕಿಸುವವರಿಗೆ ಉತ್ತರ ಕೊಡದಿರುವುದೇ ಸೂಕ್ತ ಎಂದು ಹೇಳಿದರು. ಉತ್ತರ ಕರ್ನಾಟಕ ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದ ಶಿಥಿಲವಾದ ಶಾಲಾ ಕಟ್ಟಡ, ಹೆಚ್ಚುವರಿ ಕಟ್ಟಡ, ಶಿಕ್ಷಕರ ಕೊರತೆ ಮಾಹಿತಿಯನ್ನು 10 ದಿನದೊಳಗೆ ಸರ್ಕಾರದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ಅಧಿಕಾರಿಗಳಿಗೆ ಹೊಸ ಅನುಭವ:
ಮೂರು ಗ್ರಾಮವಾಸ್ತವ್ಯಗಳಲ್ಲೂ ಆಯಾ ಪ್ರದೇಶದ ಮೂಲ ಸೌಕರ್ಯದ ಅಭಿವೃದ್ದಿಗೆ ಮನವಿಗಳು ಬಂದಿವೆ. ಅದೇ ರೀತಿ ತಮ್ಮ ವೈಯಕ್ತಿಕ ಸಮಸ್ಯೆ ಹಾಗೂ ನೋವುಗಳಿಗೆ ಸಾವಿರಾರು ಮಂದಿ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ ಅವರ ಸಮಸ್ಯೆಗಳಿಗೆ ತಾಯಿ ಹೃದಯದಿಂದ ಕೆಲಸ ಮಾಡಲಿದ್ದಾರೆ. 2006ರಲ್ಲಿ ನಡೆಸಿದ ಗ್ರಾಮವಾಸ್ತವ್ಯಕ್ಕಿಂತ ಈ ಗ್ರಾಮವಾಸ್ತವ್ಯ ಭಿನ್ನವಾಗಿದ್ದು ದೊಡ್ಡ ಮಟ್ಟದಲ್ಲಿ ನಡೆದಿದೆ.

ಇದರಿಂದ ಅಧಿಕಾರಿಗಳಲ್ಲೂ ಹೊಸ ಅನುಭವ ಮತ್ತು ಬದ್ಧತೆ ಹೆಚ್ಚಿಸಿದೆ ಎಂಬ ಭಾವನೆ ಇದೆ. ಶೇ.100ರಷ್ಟು ಅಧಿಕಾರಿಗಳು ಬದಲಾಗದಿದ್ದರೂ ಶೇ.75ರಷ್ಟಾದರೂ ಬದಲಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗ್ಗೆಯಿಂದಲೂ ಸಂಜೆಯವರೆಗೆ ಜನತಾದರ್ಶನ ನಡೆಸಿ ಜನರ ಸಂಕಷ್ಟವನ್ನು ಆಲಿಸಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಎರಡು ದಿನದ ಗ್ರಾಮವಾಸ್ತವ್ಯಕ್ಕೆ ಸಹಕರಿಸಿದ ಸಚಿವರು, ಶಾಸಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.  ಸಚಿವರಾದ ಬಂಡೆಪ್ಪ ಕಾಶಂಪುರ್, ರಾಜಶೇಖರ್ ಪಾಟೀಲ, ಕರ್ನಾಟಕ ಅರಣ್ಯ ಅಭಿವೃದ್ದಿ ಅಧ್ಯಕ್ಷ ಬಿ.ನಾರಾಯಣರಾವ್ ಮತ್ತಿತರರು ಉಪಸ್ಥಿತರಿದ್ದರು.

Facebook Comments