ಒಂದೇ ವೇದಿಕೆಯಲ್ಲಿ ಮೂರೂ ಪಕ್ಷಗಳ ಬದ್ಧ ವೈರಿಗಳು ಸೇರಿದಾಗ ಏನೇನಾಯ್ತು..?

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಸೆ.4- ರಾಜಕೀಯವಾಗಿ ಬದ್ಧ ವಿರೋಗಳಾಗಿರುವ ಮೂರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಸಂಗಮವಾದ ಅಪರೂಪದ ದೃಶ್ಯ ಕಂಡುಬಂತು. ಭಾರತ ಸಂವಿಧಾನ ಬಳಗ ಹಮ್ಮಿಕೊಂಡಿದ್ದ ಕುದಿಯುವ ನೀಲಿಯ ಕಡಲ ಕ್ರಾಂತಿಕವಿ ನಾಡೋಜ ಡಾ.ಸಿದ್ದಲಿಂಗಯ್ಯ ಅವರನ್ನು ನೆನೆಯೋಣ ಬನ್ನಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಒಂದೇ ವೇದಿಕೆಯಲ್ಲಿ ಸಂಗಮವಾದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.

ರಾಜಕಾರಣದಲ್ಲಿ ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿರುವ ಈ ಮೂವರು ದಿಗ್ಗಜರು ನಾಡೋಜ ಡಾ.ಸಿದ್ದಲಿಂಗಯ್ಯ ಅವರನ್ನು ನೆನೆಯೋಣ ಎಂಬ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಗಮನ ಸೆಳೆದರು.ಸಂಸದ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್ ಯಾವುದೇ ಬಿಗುಮಾನ ತೋರದೆ ಪರಸ್ಪರ ಮಾತನಾಡಿ ಹರಟೆ ಹೊಡೆದು ನಕ್ಕು ನಲಿದರೆ, ಪಕ್ಕದಲ್ಲೇ ಇದ್ದ ಕುಮಾರಸ್ವಾಮಿ ಮೌನವಾಗಿದ್ದದ್ದು ಕಂಡುಬಂತು.

ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಅಂಬೇಡ್ಕರ್ ತತ್ವ-ಸಿದ್ಧಾಂತ ಹಾಗೂ ಕ್ರಾಂತಿಕಾರಿ ಗೀತೆಗಳ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದ ಕವಿ ಡಾ.ಸಿದ್ದಲಿಂಗಯ್ಯ ಅಂತಹವರು ಮತ್ತೆ ಹುಟ್ಟಿಬರಬೇಕು ಎಂದು ಅಭಿಪ್ರಾಯಪಟ್ಟರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕವಿ ಡಾ.ಸಿದ್ದಲಿಂಗಯ್ಯನವರ ಬರವಣಿಗೆಯಲ್ಲಿ ಸೂಕ್ಷ್ಮತೆ ಇತ್ತು, ಹೋರಾಟದಲ್ಲಿ ಕಿಚ್ಚಿತ್ತು, ಮಾತುಗಳಲ್ಲಿ ನುಡಿಮುತ್ತುಗಳಿತ್ತು. ಅವರನ್ನು ನೆನೆಯೋಣ ಬನ್ನಿ ಎನ್ನುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ವಾಮೀಜಿ ಹೇಳಿದಂತೆ ಸಿ.ಪಿ.ಯೋಗೇಶ್ವರ್ ಅವರು ನಾಲ್ಕೈದು ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ. ಅವರಿಗೆ ಶುಭವಾಗಲಿ ಎಂದು ಸಂಸದ ಡಿ.ಕೆ.ಸುರೇಶ್ ಕೈಕುಲುಕಿ ಶುಭ ಕೋರಿ ಕಾರ್ಯಕ್ರಮದಿಂದ ನಿರ್ಗಮಿಸಿದರು.

ಸಿ.ಪಿ.ಯೋಗೇಶ್ವರ್ ಮಾತನಾಡಿ, ನಾನು ರಾಜಕೀಯಕ್ಕೆ ಬರುವ ಮುಂಚೆಯೇ ಡಾ.ಸಿದ್ದಲಿಂಗಯ್ಯನವರ ಪರಿಚಯವಿತ್ತು ಎಂದು ಅವರೊಂದಿಗೆ ಇದ್ದ ಒಡನಾಟ, ಅವರ ಚಿಂತನೆ, ಸಾಮಾಜಿಕ ಕಳಕಳಿಯನ್ನು ನೆನಪಿಸಿಕೊಂಡರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಡಾ.ಅಂಬೇಡ್ಕರ್ ಮತ್ತು ಡಾ.ಸಿದ್ದಲಿಂಗಯ್ಯನವರ ಮಾರ್ಗದರ್ಶನದಂತೆ ನಾವುಗಳು ಸ್ವಾರ್ಥದ ಕತ್ತರಿಗಳಾಗದೆ ಒಂದುಗೂಡಿಸುವ ಸೂಜಿಗಳಾಗಬೇಕು ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ನಿವೃತ್ತ ಐಎಎಸ್ ಅಕಾರಿ ಶಿವರಾಮ್, ದಿ.ಡಾ.ಸಿದ್ದಲಿಂಗಯ್ಯನವರ ಧರ್ಮಪತ್ನಿ ರಮಾದೇವಿ ಸಿದ್ದಲಿಂಗಯ್ಯ, ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin