ಸಾರಿಗೆ ನೌಕರರ ಮನವೊಲಿಸಿ ಸಾರ್ವಜನಿಕರ ಅನಾನುಕೂಲ ತಪ್ಪಿಸಿ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೀದರ್,ಏ.10- ಸಾರಿಗೆ ನೌಕರರ ಮನವೊಲಿಸಿ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ರಾಜ್ಯ ಸರ್ಕಾರ ತಪ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಇರುವುದಾದರೂ ಏಕೆ,ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ನಿವಾರಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ದಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಿ ಬಿಕ್ಕಟ್ಟನ್ನು ಬಗೆಹರಿಸಬೇಕು. ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಯಾರೂ ಮೇಲಿಂದ ಇಳಿದುಬಂದಿಲ್ಲ. ಈ ಹುದ್ದೆಗಳು ಯಾರಿಗೂ ಶಾಶ್ವತವಲ್ಲ ಎಂದರು. ಉದ್ದಟತನದ ನಡವಳಿಕೆಗಳು ಮುಂದೆ ದೊಡ್ಡ ಗಂಡಾಂತರವನ್ನು ತಂದೊಡ್ಡಬಹುದು. ಇಂಥದ್ದೆಕ್ಕಲ್ಲ ಅವಕಾಶ ಕೊಡಬಾರದು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಾರಿಗೆ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದರೂ ಮಾತುಕತೆ ನಡೆಸುವುದಿಲ್ಲ ಎಂದರೆ ವಿಧಾನಸೌಧದಲ್ಲಿ ಇರುವುದಾದರೂ ಯಾಕೆ? ಖಜಾನೆ ಖಾಲಿ ಮಾಡುತ್ತಿದ್ದಾರೆ. ಇದೇ ರೀತಿಯ ಉದ್ದಟತನ ಮುಂದುವರೆದರೆ ಬಿಜೆಪಿ ಮುಕ್ತ ಆಗುವ ದಿನಗಳು ದೂರವಿಲ್ಲ ಎಂದು ಹೇಳಿದರು.

ಉದ್ದಟತನ ಬಿಟ್ಟು ಸಾರಿಗೆ ನೌಕರರ ಸಮಸ್ಯೆ ಬಗೆಹರಿಸುವ ಕಡೆ ಮುಖ್ಯಮಂತ್ರಿ ಹಾಗೂ ಸಚಿವರು ಗಮನಹರಿಸಬೇಕು. ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂ ಜಾರಿ ಮಾಡಲಾಗಿದೆ. ಎಷ್ಟರ ಮಟ್ಟಿಗೆ ಅದು ಅನುಕೂಲವಾಗುತ್ತದೆಯೋ ಗೊತ್ತಿಲ್ಲ ಎಂದು ಅವರು ತಿಳಿಸಿದರು.

Facebook Comments