ಇನ್ನೇರಡು ದಿನಗಳಲ್ಲಿಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಇನ್ನೇರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಹಾಲಕ್ಷ್ಮಿಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ 2 ನೇ ಆವೃತ್ತಿ ಇದು. 2008 ರಲ್ಲಿ ಒಮ್ಮೆ ನಡೆದಿತ್ತು. ಈಗ 2019 ರಲ್ಲಿ ಮತ್ತೆ ನಡೆದಿದೆ.

ಅಧಿಕಾರಕ್ಕಾಗಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ 15 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ. ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ. ಎಲ್ಲ ಜಿಲ್ಲೆಗಳ ಮುಖಂಡರ ಸಭೆಯನ್ನು ಈಗಾಗಲೇ ಜೆಡಿಎಸ್ ವರಿಷ್ಠರು ನಡೆಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ಎಲ್ಲ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

ದೇವೇಗೌಡರ ಕುಟುಂಬ ಇಲ್ಲಿಯವರೆಗೆ ಅನುಭವಿಸಿದ ನೋವು ಸಾಕಾಗಿದೆ. ಕೆಲವು ಮಾಧ್ಯಮಗಳಲ್ಲಿ ಮತ್ತೆ ಗೌಡರ ಕುಟುಂಬದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಬರುತ್ತಿದೆ. ಆದರೆ, ಒತ್ತಡ ಇದ್ದರೂ ಸ್ಥಳೀಯರಿಗೇ ಟಿಕೆಟ್.

ಸಾಮಾನ್ಯ ಕಾರ್ಯಕರ್ತರನ್ನೂ ಗೆಲ್ಲಿಸಿಕೊಂಡು ಬರ್ತೀವಿ. ನಮ್ಮ ಕುಟುಂಬ ಸದಸ್ಯರು ಯಾರೂ ಉಪಕದನ ಆಗಲಿ, ದೊಡ್ಡ ಕದನ ಆಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

ಇಲ್ಲಿಯವರೆಗೆ ನಾವು ಪಟ್ಟಿರುವ ಹಿಂಸೆ ಸಾಕಾಗಿದೆ. ನಮ್ಮ ಕುಟುಂಬದವರು ಸ್ಪರ್ಧೆ ಮಾಡುತ್ತಾರೆ ಎಂಬುದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಉಪ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರು ಸಹ ಅಭ್ಯರ್ಥಿಗಳು ಇರುವುದಿಲ್ಲ.

ಕಾರ್ಯಕರ್ತರ ಒತ್ತಡ ಇದ್ದರೂ, ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸುವ ಬಗ್ಗೆ ನಮಗೆ ಒತ್ತಡ ಇದೆ. ಕೆ.ಆರ್, ಪೇಟೆ, ಹುಣಸೂರು, ಚಿಕ್ಕಬಳ್ಳಾಪುರದಲ್ಲೂ ನಮ್ಮ ಕುಟುಂಬದವರು ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಇದೆ. ಆದರೆ ನಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡುವುದಿಲ್ಲ ಎಂದರು.

ನಮ್ಮ ಕುಟುಂಬದ ವೈಮನಿಸ್ಸಿನಿಂದ ಪಕ್ಷವನ್ನು ಬಲಿಕೊಡುವುದಿಲ್ಲ. ನಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಗಿಂತ ಹೆಚ್ಚಿನ ಕ್ಷೇತ್ರದಲ್ಲಿ ಗೆಲ್ಲಲೂ ಜನತೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಬಿಜೆಪಿ ಆಡಳಿತದಲ್ಲಿ ಜನ ಈಗಾಗಲೇ ಬೇಸತ್ತಿದ್ದಾರೆ. ನೆರೆ ವಿಷಯದಲ್ಲಿ ಬಿಜೆಪಿ ವರ್ತನೆ ಜನರಲ್ಲಿ ಆಕ್ರೋಶ ಮೂಡಿಸಿದೆ. ಇನ್ನು ಕಾಂಗ್ರೆಸ್ ನಾಯಕರ ಕಿತ್ತಾಟ ಜನರಿಗೆ ಬೇಸರ ಮೂಡಿಸಿದೆ. ಈ ಮಧ್ಯೆ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ಬಿಜೆಪಿ ಬರ ನಿರ್ವಹಣೆ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಸ್ಥಳೀಯ ಮುಖಂಡರ ಗೊಂದಲವಿದೆ. ನಾನು‌ ಸಿಎಂ ಆಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತಂದಿದ್ದೆ. ಸಾಲಮನ್ನಾ, ಋಣಮುಕ್ತ ಕಾಯ್ದೆ ಜಾರಿಗೆ ತಂದೆ.

ಆದರೆ, ಬಿಜೆಪಿ ಋಣಮುಕ್ತ ಕಾಯ್ದೆ ಜಾರಿ ಸರಿಯಾಗಿ ತರುತ್ತಿಲ್ಲ. ಬಡ್ಡಿ ತೆಗೆದುಕೊಳ್ಳುವವರಿಗೆ ಬಿಜೆಪಿಯವರು ಅನುಕೂಲ ಮಾಡಿಕೊಡುತ್ತಿದ್ದಾರೆ. ಬಡವರ ಬಂಧು ಸರಿಯಾಗಿ ಜಾರಿ ತಂದಿಲ್ಲ. ಬಿಜೆಪಿ ವೈಫಲ್ಯದ ಬಗ್ಗೆ ಜನರ ಬಳಿ ಹೋಗುತ್ತೇವೆ ಎಂದು ಗುಡುಗಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಶಕ್ತಿ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೆರವು ನೀಡಿ ಹೃದಯ ವೈಶಾಲ್ಯ ಮೆರೆದವು. ಆದರೆ ಕಾಂಗ್ರೆಸ್ ಇಂದ ಈ ಸಹಾಯ ನಮಗೆ ಸಿಗಲಿಲ್ಲ. ಹೀಗಾಗಿ ಯಾರ ಸಹವಾಸವೂ ಬೇಡ ಅಂತ ಸ್ವತಂತ್ರವಾಗಿಯೇ ನಾವು ಉಪ ಚುನಾವಣೆ ಎದುರಿಸುತ್ತೇವೆ ಎಂದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin